ಬೆಂಗಳೂರು: ವಿಜಯಪುರ ಮಹಾನಗರ ಪಾಲಿಕೆ, ಕೊಳ್ಳೇಗಾಲ ನಗರಸಭೆಯ ಉಪ ಚುನಾವಣೆ ಹಾಗೂ ಹಾವೇರಿ ಜಿಲ್ಲೆಯ ಸವಣೂರು ಪುರಸಭೆಯಲ್ಲಿ ಭಾರತೀಯ ಜನತಾ ಪಕ್ಷವೂ ಅಭೂತಪೂರ್ವ ಗೆಲುವು ಸಾಧಿಸಿದೆ. ಚುನಾವಣೆಯ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂತಸ ವ್ಯಕ್ತಪಡಿಸಿ, ಗೆದ್ದ ಅಭ್ಯರ್ಥಿಗಳಿಗೆ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 35 ಸ್ಥಾನಗಳಲ್ಲಿ 17 ಸ್ಥಾನಗಳನ್ನು ಗೆದ್ದು ಬಿಜೆಪಿ ನಗೆ ಬೀರಿದೆ. ಕೊಳ್ಳೇಗಾಲ ನಗರಸಭೆಯ 7 ವಾರ್ಡ್ ಗಳಲ್ಲಿ 6 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ವಕ್ಷೇತ್ರ ಶಿಗ್ಗಾವಿಯ ಸವಣೂರು ಪುರಸಭೆಯ ವಾರ್ಡ್ ನಂಬರ್ 3 ರಲ್ಲಿ ದುರ್ಗಪ್ಪ ಭೀಮಣ್ಣ ಗಡೆದ ಅವರು 444 ಮತಗಳಿಂದ ವಿಜಯಶಾಲಿಗಳಾಗಿದ್ದಾರೆ ಎಂದರು.
ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್. ಮಹೇಶ ಮತ್ತು ಶಿಗ್ಗಾವಿ ಕ್ಷೇತ್ರದ ಬಿಜೆಪಿ ಮತ್ತು ಕಾರ್ಯಕರ್ತರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಧನ್ಯವಾದ ತಿಳಿಸಿದ್ದಾರೆ.
ಈ ಫಲಿತಾಂಶವೂ ಮುಂಬರುವ 2023 ರ ಚುನಾವಣೆಯಲ್ಲಿ ಕರ್ನಾಟಕದೆಲ್ಲೆಡೆ ಕಮಲ ಅರಳುವ ಮುನ್ಸೂಚನೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಭ ಕೋರಿದ್ದಾರೆ.