ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಏರಲಿದೆ. ಬಿಜೆಪಿ ಮೇಲೆ ಜನಾಶೀರ್ವಾದ ಇರಬೇಕು ಎಂದು ರಾಜ್ಯದ ಸಚಿವ ಬೈರತಿ ಬಸವರಾಜು ಅವರು ಮನವಿ ಮಾಡಿದರು.
ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಇಂದು ‘ಜನಸಂಕಲ್ಪ’ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಡಿಯುವ ನೀರು ಒದಗಿಸಲು 180 ಕೋಟಿ ವೆಚ್ಚ ಮಾಡಲಾಗುವುದು ಎಂದು ತಿಳಿಸಿದರು.
ಸಚಿವ ಗೋವಿಂದ ಕಾರಜೋಳ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಜಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈಗಳನ್ನು ಬಲಪಡಿಸಲು ಬಿಜೆಪಿಯನ್ನು ಗೆಲ್ಲಿಸಿ ಎಂದು ವಿನಂತಿಸಿದರು.
ಸಚಿವ ಬಿ.ಶ್ರೀರಾಮುಲು ಅವರು ಮಾತನಾಡಿ, ರಾಜುಗೌಡರ ನೇತೃತ್ವದಲ್ಲಿ ಈ ಭಾಗದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಆಗಿವೆ. ನುಡಿದಂತೆ ನಡೆದ ವ್ಯಕ್ತಿ ಅವರು. ಅವರನ್ನು ಮತ್ತೆ ಗೆಲ್ಲಿಸಿ ಎಂದರು. ರಾಜ್ಯದ ಸಮಗ್ರ ಅಭಿವೃದ್ಧಿಗೆ ಬೊಮ್ಮಾಯಿಯವರು ಸಂಕಲ್ಪ ಮಾಡಿದ್ದು, ಬಿಜೆಪಿಯ 150 ಶಾಸಕರನ್ನು ಜನತೆ ಗೆಲ್ಲಿಸಬೇಕು. ಇದು 2023ರಲ್ಲಿ ನನಸಾಗುವ ಸಂಕೇತಗಳು ಲಭಿಸಿವೆ ಎಂದರು.
ನಮ್ಮ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕಕ್ಕೆ 3 ಸಾವಿರ ಕೋಟಿ ಅನುದಾನ ನೀಡಿದ್ದಾರೆ. ಮುಂದಿನ ಬಾರಿ 5 ಸಾವಿರ ಕೋಟಿ ಅನುದಾನ ನೀಡುವುದಾಗಿ ತಿಳಿಸಿದ್ದಾರೆ. ಮೀಸಲಾತಿ ವಿಚಾರದಲ್ಲೂ ದಿಟ್ಟ ನಿರ್ಧಾರ ಮಾಡಿದ್ದಾರೆ. ಇದು ಅವರ ಹೃದಯ ಶ್ರೀಮಂತಿಕೆಯ ಸಂಕೇತ ಎಂದು ಮೆಚ್ಚುಗೆ ಸೂಚಿಸಿದರು. ಇವೆಲ್ಲವನ್ನೂ ಗಮನಿಸಿ ಈ ಭಾಗದಲ್ಲಿ ಅತಿ ಹೆಚ್ಚು ಬಿಜೆಪಿ ಶಾಸಕರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರುಗುಂದಿ ಅವರು ಮಾತನಾಡಿ, ರಾಜು ಗೌಡರು ಶಾಸಕರಾಗಿ ಸತತ ಆಯ್ಕೆಯಾಗಿದ್ದಾರೆ. ಇವರು ಗರಿಷ್ಠ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಆದರೆ, ವಿರೋಧ ಪಕ್ಷದವರು ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಖಂಡನೀಯ ಎಂದರು. ಹಾಲುಮತ ಸಮಾಜಕ್ಕೆ ರಾಜಕೀಯದಲ್ಲೂ ವಿಶೇಷ ಅವಕಾಶ ನೀಡಿದ ರಾಜು ಗೌಡರನ್ನು ಮತ್ತೆ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಡೆಯಾಪುರ ಬಸನಗೌಡ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷವು 3 ದಶಕಗಳ ಸೇವೆಗೆ ಬೆಲೆ ಕೊಟ್ಟಿರಲಿಲ್ಲ. ಆದರೆ, ಬಿಜೆಪಿ, ಶಾಸಕ ರಾಜುಗೌಡರು ನನಗೆ ಅವಕಾಶ ನೀಡಿದರು ಎಂದು ವಿವರಿಸಿದರು. 2023ರಲ್ಲಿ ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರ ಪಡೆಯಲಿದೆ ಎಂದು ನುಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದ ಸಚಿವ ಮುರುಗೇಶ್ ನಿರಾಣಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಸಂಸದರು, ಶಾಸಕರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.