ಬೆಂಗಳೂರು: ‘ಹೇಳಿಕೊಳ್ಳಲು ಯಾವುದೇ ಜನಪರ ಸಾಧನೆಗಳನ್ನು ಮಾಡದ ಬಿಜೆಪಿ ಸರ್ಕಾರ ಜನೋತ್ಸವ ಬದಲಿಗೆ, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸಾರ್ವಕರ್ ಉತ್ಸವವನ್ನು ಮಾಡುತ್ತಿದೆ’ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಅವರು ವಾಗ್ದಾಳಿ ನಡೆಸಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಮಾಧ್ಯಮಗೋಷ್ಠಿ ನಡೆಸಿದ ಅವರು ಸಾರ್ವಕರ್ ಅವರ ವಿಚಾರಧಾರೆಗಳನ್ನು ಮುಂದಿಟ್ಟು ಬಿಜೆಪಿಗೆ ಪಂಚ ಪ್ರಶ್ನೆಗಳನ್ನು ಹಾಕಿದರು.
1 . ಸಾರ್ವಕರ್ ಅವರು ಸ್ವಾತಂತ್ರ್ಯ ಹೋರಾಟ ಮಾಡುವ ಉದ್ದೇಶ ಇದ್ದಿದ್ದರೆ ಅವರು ವಿದೇಶದಲ್ಲಿ ಬಂಧನವಾದಾಗ ಭಾರತಕ್ಕೆ ಬರಲು ಯಾಕೆ ಒಪ್ಪಲಿಲ್ಲ?
2. ಸಾರ್ವಕರ್ ಅವರು ಸೆರೆವಾಸದಲ್ಲಿದ್ದಾಗ ಸಾರ್ವಕರ್ ಅವರು ಬ್ರಿಟೀಷರಿಗೆ ಆರು ಬಾರಿ ಕ್ಷಮಾಪಣಾ ಪತ್ರ ಬರೆದಿದ್ದು ಯಾಕೆ?
3. ಈ ಕ್ಷಮಾಪಣಾ ಪತ್ರಗಳನ್ನು ಬಿಜೆಪಿಯವರು ಮಾಸ್ಟರ್ ಸ್ಟೋಕ್ ಎನ್ನುತ್ತಿದ್ದು, ಇವುಗಳು ಮಾಸ್ಟರ್ ಸ್ಟ್ರೋಕ್ ಎಂದು ಭಾವಿಸಿದರೂ ಅವರು ಜೈಲಿಂದ ಬಿಡುಗಡೆಯಾದ ನಂತರ ಅವರು ಎಷ್ಟು ಹೋರಾಟ ಮಾಡಿದರು? ಅದರ ಪರಿಣಾಮಗಳೇನು?
4. ಮುಸ್ಲೀಂ ಲೀಗ ಜತೆ ಅವರು ದೇಶದ ಹಲವು ಕಡೆಗಳಲ್ಲಿ ಸರ್ಕಾರ ರಚಿಸಿದ್ದು ಯಾಕೆ? ಅವರು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಲಿಲ್ಲ ಯಾಕೆ?
ದೇಶದಲ್ಲೇ ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿ ಆರೋಗ್ಯ ಕ್ಷೇತ್ರಕ್ಕಾಗಿ ವಿಷನ್ ಡಾಕ್ಯುಮೆಂಟ್ – ಸಚಿವ ಸುಧಾಕರ್
5. ಸಾರ್ವಕರ್ ಹಿಂದುತ್ವದ ಪಿತಾಮಹ ಎಂಬುದು ನಿಜವಾಗಿದ್ದರೆ, ಅವರು ಗೋಮಾತೆಯ ಪೂಜೆ ಮಾಡಬೇಡಿ ಎಂದಿದ್ದರು. ಅವರ ಮಾತಿನಿಂತೆ ಗೋಮಾತೆ ಪೂಜೆ ಬಿಡುತ್ತೀರಾ? ಧರ್ಮದ ಆಧಾರದ ಮೇಲೆ ನಮ್ಮ ದೇಶ ವಿಭಜನೆ ಮಾಡಬೇಕು ಎಂದು ಮೊದಲು ಧ್ವನಿ ಎತ್ತಿದವರ ಪೂಜೆ ಯಾಕೆ ಮಾಡುತ್ತಿದ್ದೀರಿ? ಸಾರ್ವಕರ್ ನಾಸ್ತಿಕರಾಗಿದ್ದರು, ಈಗ ಪ್ರತಿ ಗಣೇಶೋತ್ಸವದ ಪೆಂಡಾಲ್ ನಲ್ಲಿ ಸಾರ್ವಕರ್ ಫೋಟೋ ಇಡುತ್ತಿರುವುದೇಕೆ? ಆ ಮೂಲಕ ದೇವರು ಮತ್ತು ಸಾರ್ವಕರ್ ಗೆ ಅಪಮಾನ ಮಾಡುತ್ತಿರುವುದೇಕೆ?
ಉಳಿದಂತೆ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು:
1906ರಲ್ಲಿ ಸಾರ್ವಕರ್ ಅವರು ಬಾಲಗಂಗಾಧರ ತಿಲಕರ ನೆರವಿನ ಮೇರೆಗೆ ಲಂಡನ್ ನಲ್ಲಿ ಕಾನೂನು ವಿದ್ಯಾಭ್ಯಾಸಕ್ಕೆ ಹೋಗುತ್ತಾರೆ. ಇದಕ್ಕೂ ಮುನ್ನ ಅಭಿನವ ಭಾರತ್ ಸೋಸೈಟಿ ಎಂಬ ಸಂಸ್ಥೆಯನ್ನು ಹುಟ್ಟುಹಾಕುತ್ತಾರೆ. 1909ರಲ್ಲಿ ನಾಸಿಕ್ ಕಲೆಕ್ಟರ್ ಆಗಿದ್ದ ಎಎಂಟಿ ಜಾಕ್ಸನ್ ಎಂಬುವವರನ್ನು ಈ ಸೋಸೈಟಿಯ ಸದಸ್ಯರು ಗುಂಡಿಟ್ಟು ಹತ್ಯೆ ಮಾಡುತ್ತಾರೆ. ಇದರ ತನಿಖೆ ಮಾಡಿದಾಗ ಇದರ ಅಧ್ಯಕ್ಷರು ಸಾರ್ವಕರ್ ಆಗಿದ್ದು, ಹತ್ಯೆಗೆ ಬಳಸಿದ ಪಿಸ್ತೂಲ್ ಇಂಗ್ಲೆಂಡ್ ನಿಂದ ರವಾನೆಯಾಗಿದ್ದು, ಇದನ್ನು ಸಾರ್ವಕರ್ ಕಳುಹಿಸಿದ್ದಾರೆ ಎಂದು ತಿಳಿಯುತ್ತದೆ. ಹೀಗಾಗಿ ಕೊಲೆಗೆ ನೆರವು ನೀಡಿದ ಹಿನ್ನೆಲೆಯಲ್ಲಿ ಸಾರ್ವಕರ್ ಅವರನ್ನು ಬಂಧಿಸಿ ಕರೆತರಲು ಆದೇಶಿಸಲಾಗುತ್ತದೆ.
ವಿ.ಡಿ. ಸಾರ್ವಕರ್ ಅವರ ಸಹೋದರ ಗಣೇಶ್ ದಾಮೋದರ್ ಸಾರ್ವಕರ್ ಅವರನ್ನು ಸಿಡಿಮದ್ದು, ಸ್ಫೋಟಕ ಪ್ರಕರಣದಲ್ಲಿ ಬಂಧಿಸಿದರು ಎಂಬ ದ್ವೇಷಕ್ಕೆ ಜಾಕ್ಸನ್ ಅವರನ್ನು ಹತ್ಯೆ ಮಾಡಲಾಗುತ್ತದೆ. ಈ ಪ್ರತಕಣ ತೀರ್ಪಿನಲ್ಲಿ ಈ ಹತ್ಯೆಗೆ ಸಾರ್ವಕರ್ ಪ್ರೇರಣೆ ಇದೆ ಎಂದು ಆರೋಪ ಪಟ್ಟಿ ಸಲ್ಲಿಸಿ ಇಂಗ್ಲೆಂಡ್ ನಿಂದ ಕರೆ ತರಲು ಆದೇಶಿಸುತ್ತಾರೆ. ನಂತರ ಸಾರ್ವಕರ್ ಅವರನ್ನು ಬಂಧಿಸುತ್ತಾರೆ. ಆಗ ಸಾರ್ವಕರ್ ಅವರು ನೇರವಾಗಿ ಭಾರತಕ್ಕೆ ಬರಲು ಒಪ್ಪದೇ ಇಂಗ್ಲೆಂಡ್ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಹಾಕಿ ಭಾರತದಲ್ಲಿನ ಕಾನೂನು ಹಾಗೂ ಅದರ ಪ್ರಕ್ರಿಯೆ ಭಿನ್ನವಾಗಿದ್ದು, ಹಸ್ತಾಂತರ ಮಾಡುವುದು ನ್ಯಾಯಸಮ್ಮತವಲ್ಲ. ಹೀಗಾಗಿ ನಾನು ಬರುವುದಿಲ್ಲ ಎಂದು ಆಕ್ಷೇಪ ಎತ್ತುತ್ತಾರೆ.
ಬಿಜೆಪಿಯವರು ದೇಶಕ್ಕಾಗಿ ಸಾರ್ವಕರ್ ಬಹಳ ತ್ಯಾಗ ಮಾಡಿದರು ಎಂದು ಹೇಳುತ್ತಾರೆ. ಆದರೆ ಸಾರ್ವಕರ್ ಭಾರತಕ್ಕೆ ಮರಳಲು ನಿರಾಕರಿಸಿದ್ದು ಯಾಕೆ?
1910ರ ಜುಲೈನಲ್ಲಿ ಭಾರತಕ್ಕೆ ಕರೆ ತರಲು ತೀರ್ಮಾನಿಸುತ್ತಾರೆ. ಹಡಗಿನಲ್ಲಿ ಬರುವಾಗ ಫ್ರಾನ್ಸ್ ನಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆಗ ಸಾರ್ವಕರ್ ಸಿಕ್ಕಿ ಬೀಳುತ್ತಾರೆ. ನಂತರ ಅವರನ್ನು ಭಾರತಕ್ಕೆ ಕರೆತರುತ್ತಾರೆ. ಈ ಕೊಲೆ ಪ್ರಕರಣ ತನಿಖೆ ಸಂದರ್ಭದಲ್ಲಿ ನಾನು ತನಿಖೆಗೆ ಸಹಕರಿಸುವುದಿಲ್ಲ, ನನ್ನನ್ನು ಕಾನೂನು ಬಾಹೀರವಾಗಿ ಕರೆತರಲಾಗಿದೆ ಎಂದು ಹೇಳುತ್ತಾರೆ. ಆಗ ಅವರ ಪರವಾಗಿ ವಾದ ಮಾಡಿದ್ದು ಜೋಸೆಫ್ ಬ್ಯಾಟಿಸ್ಟಾ ಎಂಬ ಕ್ರೈಸ್ತ ವಕೀಲರು.
ಸಾರ್ವಕರ್ ಅವರು ನಾಸ್ತಿಕರಾಗಿದ್ದು, ವಿಚಾರವಾಗಿಗಳು ಆಗಿದ್ದರು. ಅವರು ಕ್ರಾಂತಿಕಾರಿ ಆಗಲು ಬಯಸಿದ್ದರು. ಆದರೆ ಕ್ರಾಂತಿಕಾರಿ ಆದ ನಂತರ ಬೆಲೆ ಕಟ್ಟುವ ಸಂದರ್ಭದಲ್ಲಿ ಅವರು ಹಿಂದೇಟು ಹಾಕಿದರು. ನಂತರ ಬ್ರಿಟೀಷ್ ಸರ್ಕಾರಕ್ಕೆ ನಿಷ್ಟರಾಗಿ ಸೇವೆ ಸಲ್ಲಿಸಿದರು. ಆದರೆ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ಹಾಗೂ ಚಂದ್ರಶೇಖರ್ ಅವರು ಕ್ರಾಂತಿಕಾರಿಯಾಗಿ ತಮ್ಮ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿ ಕೊನೆ ಗಳಿಗೆವರೆಗೂ ಕ್ರಾಂತಿಕಾರಿಯಾಗಿ ಉಳಿದರು. ಈ ಬೆಲೆಯನ್ನು ತೆರಲು ಸಾರ್ವಕರ್ ಸಿದ್ಧರಿರಲಿಲ್ಲ.
ಸಾರ್ವಕರ್ ಅವರಿಗೆ ಎರಡು ಪ್ರಕರಣದಲ್ಲಿ ತಲಾ 25 ವರ್ಷ ಜೈಲು ಶಿಕ್ಷೆ ಸಿಕ್ಕಾಗ ಅವರು ಕುಗ್ಗಿಹೋದರು. ಕ್ರಾಂತಿಕಾರಿ ಹೋರಾಟದಿಂದ ಹಿಂದೆ ಸರಿದರು. ಅಂಡಾಮಾನ್ ಜೈಲಿನಲ್ಲಿ ಹಾಕಿದರು. ಅಲ್ಲಿ ಖೈದಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಲಾಗಿತ್ತು. ಆದರೆ ಸಾರ್ವಕರ್ ಅವರು ಬ್ರಿಟೀಷರ ಜತೆ ಉತ್ತಮ ಬಾಂದವ್ಯ ಹೊಂದಿದ್ದರು ಎಂದು ಕ್ಲರ್ಕ್ ಕೆಲಸ ನೀಡಿದ್ದರು. ಈ ಜೈಲಿನಲ್ಲಿ 698 ಸೆಲ್ ಗಳಿದ್ದವು. ಸಾರ್ವಕರ್ ಜತೆಗೆ ಉಳಿದ 697 ಖೈದಿಗಳು ಅದೇ ಕಠಿಣ ಶಿಕ್ಷೆ ಅನುಭವಿಸುತ್ತಿದ್ದರು. ಆದರೆ ಇವರಲ್ಲಿ ಹೆಚ್ಚಿನ ಕ್ಷಮಾಪಣಾ ಪತ್ರ ಬರೆದಿದ್ದು ಸಾರ್ವಕರ್ ಮಾತ್ರ. ಅದೇ ಸತ್ಯ.
ಜೈಲಿಗೆ ಹೋದ 2 ತಿಂಗಳಲ್ಲೇ 1911ರ ಆ.30ರಂದು ಮೊದಲ ಕ್ಷಮಾಪಣಾ ಪತ್ರ ಬರೆಯುತ್ತಾರೆ. ಆ ವರ್ಷ ಕ್ಷಮಾಪಣ ಪತ್ರ ಬರೆದ ಮೂವರಲ್ಲಿ ಬರೀಂದ್ರ ಘೋಷ್ ಹಾಗೂ ಸಾರ್ವಕರ್ ಸಹೋದರರು. ಇದರಲ್ಲಿ ಸಾರ್ವಕರ್ ಅವರು ‘ನಾನು ಬ್ರಿಟೀಷ್ ಸರ್ಕಾರದ ಸೇವೆ ಸಲ್ಲಿಸಲು ನಾನು ಸಿದ್ಧನಿದ್ದೇನೆ. ದಾರಿ ತಪ್ಪಿದೆ ಮಗ ಮನೆಗೆ ಬಾರದೆ ಎಲ್ಲಿಗೆ ಹೋಗಬೇಕು. ಹೀಗಾಗಿ ನಾನು ಕ್ಷಮೆ ಕೋರುತ್ತೇನೆ’ ಎಂದು ಕೇಳುತ್ತಾರೆ.
1913ರಲ್ಲಿ ಎರಡನೇ ಕ್ಷಮಾಪಣಾ ಪತ್ರ ಬರೆಯುತ್ತಾರೆ. ಈ ವರ್ಷ 6 ಜನ ಬ್ರಿಟೀಷ್ ಸರ್ಕಾರಕ್ಕೆ ಪತ್ರ ಬರೆಯುತ್ತಾರೆ. ಆದರೆ ಸಾರ್ವಕರ್ ಸಹೋದರರು ಮಾತ್ರ ಕ್ಷಮೆ ಕೋರುತ್ತಾರೆ. ಉಳಿದವರು ಈ ಜೈಲಿನಲ್ಲಿನ ಶಿಕ್ಷೆ ಅಮಾನವೀಯವಾಗಿದ್ದು, ನಮ್ಮನ್ನು ಮಾನವೀಯತೆಯಿಂದ ನಡೆಸಿಕೊಳ್ಳಿ ಎಂದು ಕೇಳಿ ಬರೆಯುತ್ತಾರೆ.
1914ರಲ್ಲಿ ಮೂರನೇ ಪತ್ರ ಬರೆದು ‘ಮೊದಲ ವಿಶ್ವ ಯುದ್ಧದಲ್ಲಿ ನಾನು ಬ್ರಿಟೀಷರ ಪರವಾಗಿ ಯಾವುದೇ ಹುದ್ದೆ ನಿಭಾಯಿಸಲು ಸಿದ್ಧ. ನಿಮ್ಮ ಸೇವೆಗೆ ನಿಷ್ಠೆಯಾಗಿ ಇರುತ್ತೇನೆ. ಇದು ನನ್ನ ಕರ್ತವ್ಯ’ ಎಂದು ತಿಳಿಸುತ್ತಾರೆ.
ನಂತರ 1918ರಲ್ಲಿ ನಾಲ್ಕನೇ, 1920ರಲ್ಲಿ ಎರಡು ಬಾರಿ ಅಂದರೆ ಒಟ್ಟು ಆರು ಬಾರಿ ಕ್ಷಮಾಪಣಾ ಪತ್ರ ಬರೆಯುತ್ತಾರೆ. ಅವರು ತಮ್ಮ ಕಡೇ ಪತ್ರದಲ್ಲಿ, ‘ಪ್ರತಿಯೊಬ್ಬ ಬುದ್ಧಿವಂತ ಭಾರತೀಯ ದೇಶದ ಹಿತಕ್ಕಾಗಿ ಹೃದಯಪೂರ್ವಕವಾಗಿ ಬ್ರಿಟೀಷ್ ಸರ್ಕಾರಕ್ಕೆ ನಿಷ್ಠೆಯಿಂದ ಸಹಕಾರ ನೀಡುತ್ತಾನೆ. ’ ಆದರೆ ಈ ಕ್ಷಮಾಪಣಾ ಪತ್ರವನ್ನು ಬಿಜೆಪಿಯವರು ಮಾಸ್ಟರ್ ಸ್ಟ್ರೋಕ್ ಎಂದು ಬಣ್ಣಿಸುತ್ತಾರೆ. ಸೆರೆವಾಸದಿಂದ ಹೊರ ಬಂದು ದೇಶ ಸೇವೆ ಮಾಡಲು ಈ ಕ್ಷಮಾಪಣಾ ಪತ್ರ ಬರೆದಿದ್ದರು ಎಂದು ಹೇಳುತ್ತಾರೆ. ಬೇರೆಯವರು ಈ ರೀತಿಯಾಗಿ ಕ್ಷಮಾಪಣೆ ಪತ್ರ ಬರೆಯಲಿಲ್ಲ ಏಕೆ?
ಭಗತ್ ಸಿಂಗ್ ಅವರಿಗೆ ಬ್ರಿಟೀಷರು ಮರಣದಂಡನೆ ಶಿಕ್ಷೆ ವಿಧಿಸಿದಾಗ ಅವರ ತಂದೆ ಕೂಡ ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರೆದು ಬಿಡುಗಡೆ ನಂತರ ದೇಶ ಸೇವೆ ಮುಂದುವರಿಸಿ ಎಂದು ಭಗತ್ ಸಿಂಗ್ ಅವರಿಗೆ ಹೇಳುತ್ತಾರೆ. ಆಗ ಭಗತ್ ಸಿಂಗ್ ಅವರು ತಮ್ಮ ತಂದೆಗೆ, ನಿಮ್ಮಿಂದ ನಾನು ಇದನ್ನು ನಿರೀಕ್ಷಿಸಿರಲಿಲ್ಲ. ನಾನು ಸತ್ತರೆ ನನ್ನಿಂದ ಇನ್ನು ನೂರು ಜನ ಸ್ವಾತಂತ್ರ್ಯ ಹೋರಾಟಗಾರರು ಹುಟ್ಟುತ್ತಾರೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲ, ನನ್ನನ್ನು ಗಲ್ಲಿಗೇರಿಸುವಾಗ ನನ್ನ ಮುಖ್ಯ ಮುಚ್ಚಲಾಗುತ್ತದೆ, ಹೀಗಾಗಿ ನನ್ನನ್ನು ನೇರವಾಗಿ ಬಂದೂಕಿನಿಂದ ಸುಟ್ಟು ಹಾಕಿ ಎಂದು ಧೈರ್ಯವಾಗಿ ಆಗ್ರಹಿಸುತ್ತಾರೆ.
ಸಾರ್ವಕರ್ ತಮ್ಮ ಜೀವನವನ್ನು ದೇಶಕ್ಕಾಗಿ ಮುಡಿಪಿಟ್ಟರು ಎಂದು ಹೇಳುವುದಾದರೆ ಅವರು ಬಿಡುಗಡೆ ಆದ ನಂತರ ಎಷ್ಟು ಹೋರಾಟ ಮಾಡಿದ್ದಾರೆ? ಇದರ ಪರಿಣಾಮ ಏನಾಯ್ತು? ಬ್ರಿಟೀಷರ ವಿರುದ್ಧ ಎಷ್ಟು ಬಾರಿ ಕೂಗಿದ್ದಾರೆ? ಇನ್ನು ಇತ್ತೀಚೆಗೆ ರಾಜನಾಥ್ ಸಿಂಗ್ ಅವರು ತಮ್ಮ ಹೇಳಿಕೆಯಲ್ಲಿ ಮಹಾತ್ಮ ಗಾಂಧಿ ಅವರೇ ಸಾರ್ವಕರ್ ಅವರಿಗೆ ಕ್ಷಮಾಪಣಾ ಪತ್ರ ಬರೆಯುವಂತೆ ತಿಳಿಸಿದರು ಎಂದು ಹೇಳಿದ್ದಾರೆ. ಆದರೆ ಇದು ಶುದ್ಧ ಸುಳ್ಳು.
1920ರಲ್ಲಿ ಗಾಂಧಿಜಿ ಅವರು ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ‘ಸಾರ್ವಕರ್ ಸಹೋದರರು ತಮ್ಮ ರಾಜಕೀಯ ಅಭಿಪ್ರಾಯವನ್ನು ಘೋಷಿಸಿದ್ದು, ಇನ್ನು ಮುಂದೆ ಅವರು ಬ್ರಿಟೀಷ್ ಸರ್ಕಾರದ ವಿರುದ್ಧ ಯಾವುದೇ ಕ್ರಾಂತಿಕಾರಿ ಹೋರಾಟ ಮಾಡುವುದಿಲ್ಲ. ಅವರನ್ನು ಬಿಡುಗಡೆ ಮಾಡಿದರೆ ಅವರಿಗೆ ಸುಧಾರಣಾ ಕಾಯ್ದೆ ಅಡಿಯಲ್ಲಿ ಬ್ರಿಟೀಷರ ಪರವಾಗಿ ಕೇಲಸ ಮಾಡಲು ಬಯಸಿದ್ದಾರೆ. ಅವರ ಪ್ರಕಾರ ಭಾರತ ಬ್ರಿಟೀಷರ ಜತೆಯಲ್ಲೇ ಇದ್ದರೆ ಉತ್ತಮ ಭವಿಷ್ಯವಿದೆ ಎಂದು ನಂಬಿದ್ದಾರೆ. ಹೀಗಾಗಿ ಅವರ ಕ್ಷಮಾಪಣಾ ಪತ್ರ ಅಂಗೀಕರಿಸಿ’ ಎಂದು ತಿಳಿಸುತ್ತಾರೆ.
ಇನ್ನು ಬಿಜೆಪಿಯವರಿಗೆ ಸರ್ದಾರ್ ಪಟೇಲರ ನಂತರ ಸುಭಾಷ್ ಚಂದ್ರಬೋಸ್ ಅವರ ಮೇಲೆ ವಿಶೇಷ ಪ್ರೀತಿ ಹುಟ್ಟಿದೆ. ಎರಡನೇ ವಿಶ್ವ ಯುದ್ಧ ಸಂದರ್ಭದಲ್ಲಿ ನೆತಾಜಿ ಸುಭಾಷ್ ಚಂದ್ರ ಬೋಸ್ ಅವರು ಜರ್ಮನಿ, ಜಪಾನ್ ದೇಶಗಳಿಗೆ ತೆರಳಿ, ದೇಶದ ಸ್ವಾತಂತ್ರ್ಯಕ್ಕೆ ಸೇನೆ ಕಟ್ಟಲು ಮುಂದಾದರು. ಆದರೆ ಈ ಸಮಯದಲ್ಲಿ ಸಾರ್ವಕರ್ ಅವರು ಬ್ರಿಟೀಷರ ಸೇನೆಗೆ ಲಕ್ಷಾಂತರ ಭಾರತೀಯರನ್ನು ಸೇರಿಸಿದರು. ಈ ಬ್ರಿಟೀಷ್ ಸೇನೆಗೆ ಸೇರಿದ ಭಾರತೀಯರು ಕೊಂದಿದ್ದು ಇದೇ ನಾತಾಜಿ ಅವರ ಅಜಾದ್ ಹಿಂದ್ ಫೌಜ್ ಪಡೆಯ ಯೋಧರನ್ನು. ಅಂದು ನಿಮ್ಮ ನಾಯಕ ನೇತಾಜಿ ಅವರ ಪ್ರಾಮಾಣಿಕ ಪ್ರಯತ್ನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದು, ಇಂದು ನೀವು ನೇತಾಜಿ ಜಪ ಮಾಡುತ್ತಿದ್ದೀರಾ?
1940ರ ಮಥುರಾದಲ್ಲಿ ನಡೆದ ಹಿಂದು ಮಹಾಸಭಾ ಅಧಿವೇಶನದಲ್ಲಿ ಸಾರ್ವಕರ್ ಅವರು ನಾನು ಬ್ರಿಟೀಷರ ಸೇನೆಗೆ 1 ಲಕ್ಷ ಯೋಧರನ್ನು ಸೇರಿಸಿದ್ದೇನೆ ಎಂದು ಬಹಿರಂಗವಾಗಿ, ಹೆಮ್ಮೆಯಿಂದ ಹೇಳಿಕೊಂಡಿದ್ದರು.
ಎರಡನೇ ವಿಶ್ವ ಯುದ್ಧಕ್ಕೂ ಮುನ್ನ 1939ರಲ್ಲೀ ಬ್ರಿಟೀಷರು ನಮ್ಮ ದೇಶದ ಪಕ್ಷಗಳಿಗೆ ಸಹಕಾರ ಕೇಳಿದರು. ಆಗ ಕಾಂಗ್ರೆಸ್ ಹಾಗೂ ಇತರ ಪಕ್ಷ ಪೂರ್ಣ ಸ್ವರಾಜ್ಯ ಕೇಳಿದರು. ಆದರೆ ಬ್ರಿಟೀಷರು ಅರೆ ಸ್ವಾಯತ್ತ ನೀಡಿ ಆಡಳಿತ ನಿಯಂತ್ರಣ ನಾವು ಮಾಡುತ್ತೇವೆ ಎಂದು ಹೇಳಿದರು. ಇದನ್ನು ಒಪ್ಪದ ಕಾಂಗ್ರೆಸ್ ಎಲ್ಲಾ ಪ್ರಾಂತೀಯ ಸರ್ಕಾರಗಳಿಗೆ ರಾಜೀನಾಮೆ ನೀಡಿದರು. ಆದರೆ ಈ ಸಮಯದಲ್ಲಿ ಸಾರ್ವಕರ್ ಅವರು ಬ್ರಿಟೀಷರಿಗೆ ಸಹಕಾರ ನೀಡುವುದಾಗಿ ಅಂದಿನ ವೈಸರಾಯ್ ಗಿಲ್ ಲಿತ್ ಗೌ ಅವರಿಗೆ ತಿಳಿಸಿದರು. ಆಗ ಅವರು ಇಂಗ್ಲೆಂಡ್ ಗೆ ಪತ್ರ ಬರೆದು, ‘ಬ್ರಿಟೀಷ್ ಸರ್ಕಾರ ಹಿಂದೂಗಳ ಬೆಂಬಲದೊಂದಿಗೆ ಕೆಲಸ ಮಾಡಬೇಕು. ಹಿಂದೂ ಮಹಾಸಭಾ ಬ್ರಿಟೀಷರ ಜತೆ ಕೆಲಸ ಮಾಡಲು ತೀರ್ಮಾನಿಸಿದ್ದು, ಎರಡನೇ ವಿಶ್ವ ಯುದ್ಧ ನಂತರ ಇವರಿಗೆ ಅರೆ ಸ್ವಾಯತ್ತ ನೀಡೋಣ’ ಎಂದು ತಿಳಿಸುತ್ತಾರೆ.
ಇಡೀ ದೇಶ ಪೂರ್ಣ ಸ್ವರಾಜ್ಯ ಕೇಳಿದಾಗ ಸಾರ್ವಕರ್ ಅವರು ಬ್ರಿಟೀಷರ ಬೆಂಬಲ ನೀಡಿದ್ದು ಯಾಕೆ? ಸಾರ್ವಕರ್ ಅವರು ಕ್ವಿಟ್ ಇಂಡಿಯಾ ಚಳುವಳಿಗೆ ಸಹಕಾರ ನೀಡಲಿಲ್ಲ ಯಾಕೆ?. ದೇಶದ ವಿವಿಧ ಪ್ರಾಂತ್ಯಗಳಲ್ಲಿ ಮುಸ್ಲಿಂ ಲೀಗ್ ಜತೆ ಸರ್ಕಾರ ಮಾಡಿದ್ದು ಯಾಕೆ? ಕಾಂಗ್ರೆಸ್ ನಾಯಕರ ಮೇಲೆ ಮುಸಲ್ಮಾನರ ಓಲೈಕೆ ಆರೋಪ ಮಾಡುವ ಬಿಜೆಪಿಗರು ಅವರ ನಾಯಕ ಅಂದು ಸ್ವಾತಂತ್ರ್ಯ ಹೋರಾಟದಲ್ಲಿ ರಾಜಿಯಾಗಿ ಮುಸ್ಲಿಂ ಲೀಗ್ ಜತೆ ಸರ್ಕಾರ ಮಾಡಿದ್ದು ಯಾಕೆ?
ಸಾರ್ವಕರ್ ಅವರಿಗೆ ವೀರ ಸಾರ್ವಕರ್ ಎಂಬ ಬಿರುದು ಕೊಟ್ಟಿದ್ದು ಯಾರು? ಎಂದು ಬಿಜೆಪಿ ನಾಯಕರಿಗೆ ಕೇಳಿದ್ದೆ. ಗಾಂಧೀಜಿ ಅವರಿಗೆ ಮಹಾತ್ಮ ಎಂಬ ಬಿರುದು ಕೊಟ್ಟಿದ್ದು, ರವೀಂದ್ರ ನಾಥ ಠಾಗೋರ್, ಸುಭಾಷ್ ಚಂದ್ರ ಬೋಸ್ ಅವರಿಗೆ ನೇತಾಜಿ ಎಂಬ ಬಿರುದು ಕೊಟ್ಟಿದ್ದು ಅಜಾದ್ ಹಿಂದ್ ಫೌಜ್ ನ ಸದಸ್ಯರು. ಆದರೆ ಸಾರ್ವಕರ್ ಅವರಿಗೆ ವೀರ್ ಎಂದು ಬಿರುದು ಕೊಟ್ಟವರು ಯಾರು ಎಂದು ಹುಡುಕಿದಾಗ, 1923ರಲ್ಲಿ ‘ಲೈಫ್ ಆಫ್ ಬ್ಯಾರಿಸ್ಟರ್ ಸಾರ್ವಕರ್’ ಎಂಬ ಪುಸ್ತಕ ಹೊರಬರುತ್ತದೆ. ಅದರ ಲೇಖಕರು ಚಿತ್ರಗುಪ್ತ. ಅದರಲ್ಲಿ ಸಾರ್ವಕರ್ ಅವರನ್ನು ಇಂದ್ರ, ಚಂದ್ರ, ಹೋರಾಟದ ಮನೋಭಾವ, ಕಿಚ್ಚು, ದೇಶಪ್ರೇಮದ ಬಗ್ಗೆ ಮಿತಿಮೀರಿ ವರ್ಣನೆ ಮಾಡಲಾಗಿತ್ತು. ಈ ಪುಸ್ತಕದಲ್ಲಿ ಸಾರ್ವಕರ್ ಅವರನ್ನು ವೀರ್ ಸಾರ್ವಕರ್ ಎಂದು ತಿಳಿಸಿರುತ್ತಾರೆ. 1966ರಲ್ಲಿ ಸಾರ್ವಕರ್ ಅವರು ಸತ್ತ ನಂತರ, 1987ರಲ್ಲಿ ಈ ಪುಸ್ತಕ 2ನೇ ಆವೃತ್ತಿ ಮುದ್ರಣಕ್ಕೆ ಹೋದಾಗ ಮೊದಲ ಆವೃತ್ತಿಯ ಮುದ್ರಣಕಾರರಾದ ರವೀಂದ್ರ ರಾಮದಾಸ್ ಅವರು ಮುನ್ನುಡಿ ಬರೆದಾಗ ಈ ಪುಸ್ತಕದ ಲೇಖಕ ಚಿತ್ರಗುಪ್ತ ಬೇರಾರೂ ಅಲ್ಲ, ಸ್ವತಃ ಸಾರ್ವಕರ್ ಎಂಬ ಅಂಶವನ್ನು ತಿಳಿಸುತ್ತಾರೆ. ಅಲ್ಲಿಗೆ ಸಾರ್ವಕರ್ ಅವರೇ ತಮಗೆ ತಾವೇ ವೀರ್ ಎಂದು ಬಿರುದು ಕೊಟ್ಟುಕೊಂಡಿದ್ದಾರೆ.
ಬಿಜೆಪಿ ನಾಯಕರು ವಾಟ್ಸಪ್ ಯೂನಿವರ್ಸಿಟಿಯಿಂದ ಹೊರ ಬಂದು ಅವರ ನಾಯಕರ ಬಗ್ಗೆ ತಿಳಿದುಕೊಳ್ಳಬೇಕು. ಬಿಜೆಪಿ ಹಾಗೂ ಆರ್ ಎಸ್ಎಸ್ ನವರು ಸಾರ್ವಕರ್ ಅವರನ್ನು ಹಿಂದುತ್ವದ ಪಿತಾಮಹಾ ಎಂದು ನಂಬಿದ್ದಾರೆ. ಇದೇ ಸಾರ್ವಕರ್ ಅವರು ಗೋಮಾತೆಯನ್ನು ಪೂಜಿಸಬಾರದು. ಗೋವು ಪವಿತ್ರ ಪ್ರಾಣಿ ಅಲ್ಲ ಉಪಯೋಗದ ಪ್ರಾಣಿ ಎಂದು ಹೇಳಿದ್ದಾರೆ. ಅವರ ಸ್ವಂತ ಲೇಖನದಲ್ಲಿ ‘ಗೋವು ಎತ್ತುಗಳಿಗೆ ಮಾತ್ರ ಮಾತೆಯಾಗಿರುತ್ತದೆಯೇ ಹೊರತು ಹಿಂದೂಗಳಿಗಲ್ಲ. ಹಿಂದುತ್ವ ಕೇವಲ ಗೋವಿನ ನಾಲ್ಕು ಕಾಲುಗಳ ಮೇಲೆ ನಿಲ್ಲುವುದಿಲ್ಲ. ಹೀಗಾಗಿ ಗೋವಿನ ಹೊಟ್ಟೆಯೊಳಗೆ 33 ಕೋಟಿ ದೇವತೆಗಳನ್ನು ತುಂಬಲಾಗಿದೆ. ಹಿಂದೂಗಳು ಗೋವು ಪೂಜೆ ಬಿಟ್ಟು ಅಪಾರ ಶಕ್ತಿ ಹೊಂದಿರುವ ಮನುಷ್ಯರ ಪೂಜೆ ಮಾಡಿ. ಗೋ ಮೂತ್ರ ಕುಡಿದರೆ ಬುದ್ಧಿ ಹತ್ಯೆಯಾಗುತ್ತದೆ’ ಎಂದು ಸಾರ್ವಕರ್ ಹೇಳಿದ್ದಾರೆ. ಆದರೆ ಈ ಸರ್ಕಾರ ಕೋವಿಡ್ ಸಮಯದಲ್ಲಿ ಗೋ ಮೂತ್ರ ಕುಡಿಯಿರಿ ಎಂದರು.
ಸಾರ್ವಕರ್ ಅವರು ಗೋಮಾಂಸ ತಿಂದಿದ್ದರು. ಬ್ರಿಟನ್ ನಲ್ಲಿ ಇದ್ದಾಗ ಅವರು ಸೇವನೆ ಮಾಡಿದ್ದರು. ಇದಕ್ಕೆ ಬಿಜೆಪಿಯವರು ವಾದ ಮಾಡುವುದು ಅವರು ಜೆರ್ಸಿ ಗೋವನ್ನು ತಿಂದಿದ್ದರು ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳುತ್ತಾರೆ. ಸಾರ್ವಕರ್ ಗೋ ಮಾತೆ ಪೂಜೆ ಮಾಡಬಾರದು ಎಂದು ಹೇಳಿರುವಾಗ ಇವರು ಗೋಹತ್ಯೆ ನಿಷೇದ ಹಿಂಪಡೆಯುತ್ತಾರಾ? ಗೋಮೂತ್ರ ಕುಡಿಯುವುದು ನಿಲ್ಲಿಸುತ್ತಾರಾ? ಗೋ ಮಾತೆ ಹೆಸರಲ್ಲಿ ನಡೆಯುತ್ತಿರುವ ಥಳಿತ ಪ್ರಕರಣ ನಿಲ್ಲಿಸುತ್ತಾರಾ?
ಇನ್ನು ಬಿಜೆಪಿಯವರು ದೇಶ ವಿಭಜನೆ ಮಾಡಿದ್ದು ನೆಹರೂ ಹಾಗೂ ಗಾಂಧಿ ಎಂದು ಹೇಳುತ್ತಾರೆ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಆಗಬೇಕು ಎಂದು ಮೊದಲು ಧ್ವನಿ ಎತ್ತಿದ್ದು ಸಾರ್ವಕರ್ ಅವರು. 1937ರಲ್ಲಿ ಅಹಮದಾಬಾದ್ ನಲ್ಲಿ ನಡೆದ ಹಿಂದೂ ಮಹಾಸಭಾ ಅಧಿವೇಶನದಲ್ಲಿ ಸಾರ್ವಕರ್ ಅವರು ‘ಭಾರತ ಹಿಂದೂ ಹಾಗೂ ಮುಸಲ್ಮಾನರಾಗಿ ವಿಭಜಿತವಾಗಿದೆ. ಈ ದೇಶ ಒಟ್ಟಾಗಿರಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. ಅದಕ್ಕೆ ಅಂಬೇಡ್ಕರ್ ಅವರು ‘ಸಾರ್ವಕರ್ ಹಾಗೂ ಜಿನ್ನಾ ಅವರು ಪರಸ್ಪರ ವಿರೋಧವಿದ್ದರೂ ಒಂದು ದೇಶದ ಬದಲು ಎರಡು ದೇಶದ ವಿಚಾರದಲ್ಲಿ ಒಮ್ಮತ ಹೊಂದಿದ್ದಾರೆ. ಮುಸಲ್ಮಾನ ದೇಶ ಹಾಗೂ ಹಿಂದೂ ದೇಶ ಇದೆ. ಇದಕ್ಕೆ ರೂಪು ರೇಷ ಹಾಕುವುದಷ್ಟೇ ಬಾಕಿ ಎಂದು ಇಬ್ಬರೂ ಒಪ್ಪಿಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ. ಸಾರ್ವಕರ್ ಅಖಂಡ ಭಾರತ ಹಾಗೂ ದೇಶ ವಿಭಜನೆ ಎರಡರ ಬಗ್ಗೆಯೂ ಮಾತನಾಡುತ್ತಾರೆ. ಸಾರ್ವಕರ್ ಹೇಳಿಕೆ ನಂತರ 1940ರಲ್ಲಿ ಲಾಹೋರ್ ನಲ್ಲಿ ನಡೆದ ಮುಸ್ಲೀಂ ಲೀಗ್ ಸಮಾವೇಶದಲ್ಲಿ ಜಿನ್ನಾ ಅವರು ಈ ವಿಚಾರ ಪ್ರಸ್ತಾಪಿಸುತ್ತಾರೆ. 1943ರ ಆಗಸ್ಟ್ 15ರ ನಾಗಪುರದಲ್ಲಿ ಸಾರ್ವಕರ್ ಅವರು, ‘ಎರಡು ದೇಶದ ವಿಚಾರವಾಗಿ ಜಿನ್ನಾ ಅವರ ಅಭಿಪ್ರಾಯವನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಹಿಂದೂಗಳು ಪ್ರತ್ಯೇಕ ರಾಷ್ಟ್ರ ಹೊಂದಬೇಕು’ ಎಂದು ಹೇಳಿದ್ದರು. ಇಷ್ಟಾಗಿಯೂ ಸಾರ್ವಕರ್ ಬೆಂಬಲಿಗರು ಅಫ್ಘಾನಿಸ್ತಾನದಿಂದ ಅಖಂಡ ಭಾರತ ಕಟ್ಟುತ್ತೇವೆ ಎಂದು ಹೊರಟಿದ್ದಾರೆ.
ಪಂಜಾಬ್ ಅವರು ಪ್ರತ್ಯೇಕ ಸಿಖ್ ರಾಷ್ಟ್ರ ಬೇಕು ಎಂದಾಗ ಅದಕ್ಕೆ ಬೆಂಬಲ ನೀಡಿದವರು ಸಾರ್ವಕರ್. ಹೀಗಿರುವಾಗ ಇವರಲ್ಲಿ ಭಾರತ ಒಗ್ಗೂಡಿಸುವ ಬದ್ಧತೆ ಎಲ್ಲಿದೆ. ಇತ್ತೀಚೆಗೆ ಬಿಜೆಪಿಯ ರವಿ ಕುಮಾರ್ ಅವರು ನೆಹರೂ ಅವರು ದೇಶ ವಿಭಜನೆ ಮಾಡಿದ್ದರು ಹೀಗಾಗಿ ಅವರ ಫೋಟೋ ಕೈ ಬಿಡಲಾಗಿದೆ ಎಂದು ಹೇಳಿದ್ದರು. ಬಿಜೆಪಿ ನಾಯಕರು ಮೊದಲು ನಿಮ್ಮ ನಾಯಕರ ಇತಿಹಾಸ ತಿಳಿದುಕೊಳ್ಳಬೇಕು. ಗಾಂಧಿ, ನೆಹರೂ ಅವರು ದೇಶ ವಿಭಜನೆ ಆಗಬಾರದು ಎಂದು ಹೋರಾಡಿದವರು.
ಕಪೂರ್ ಸಮಿತಿಯ ವರದಿಯಲ್ಲಿ ಮಹಾತ್ಮಾ ಗಾಂಧಿ ಅವರ ಹತ್ಯೆಗೆ ಪ್ರೇರಣೆ ನೀಡಿದ್ದು, ಸಾರ್ವಕರ್ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಸಾರ್ವಕರ್ ಅವರ ಕ್ಷಮಾಪಣಾ ಪತ್ರ ಮಾಸ್ಟರ್ ಸ್ಟ್ರೋಕ್ ಆದರೆ ಅವರು 1929 ಆ.1ರಿಂದ 1947ರ ವರೆಗೆ 60 ರೂ. ಪಿಂಚಣಿ ಪಡೆದಿದ್ದು ಯಾಕೆ? ಈ ಅವಧಿಯಲ್ಲಿ ಅವರು ಹೆಚ್ಚಾಗಿ ಬರೆದ ಪತ್ರಗಳು ತಮ್ಮ ಪಿಂಚಣಿ ಹೆಚ್ಚಳಕ್ಕೆ ಸಂಬಂಧಿಸಿದಂತೆ. ಇನ್ನು ಸಾರ್ವಕರ್ ರಥಯಾತ್ರೆಗೆ ಕಾರ್ಯಕರ್ತರಿಗೆ ಹಣಕೊಟ್ಟು ಕರೆದುಕೊಂಡು ಬರಲಾಗಿದೆ. 500 ರೂ. ಕೊಡುತ್ತೇವೆ ಎಂದು ಹೇಳಿ, 200 ರೂ ಕೊಟ್ಟಿದ್ದಾರೆ. ಈ ಬಗ್ಗೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದಾಗ ಮಾಧ್ಯಮದವರಿಗೆ ಈ ವಿಚಾರ ತಿಳಿದಿದೆ.
ಬಿಜೆಪಿ ಅವರು ಮಠಗಳಿಗೆ 30%, ಗುತ್ತಿಗೆದಾರರಿಗೆ 40%, ಬಿಬಿಎಂಪಿಯಲ್ಲಿ 50%, ತಮ್ಮ ಕಾರ್ಯಕರ್ತರಿಗೆ 60% ಕಮಿಷನ್ ನಿಗದಿ ಮಾಡಿದ್ದಾರೆ. ಜನ ಈಗಾಗಲೇ ಅತಿವೃಷ್ಟಿಯಿಂದ ನರಳುತ್ತಿದ್ದು, ಮೂಲ ಸೈಕರ್ಶ ನಾಶವಾಗಿದೆ. ರೈತರು ಕಣ್ಣೀರು ಹಾಕುತ್ತಿದ್ದಾರೆ. ಗುತ್ತಿಗೆದಾರರ ಸಂಘದವರು ಎರಡು ಪತ್ರ ಬರೆಯುತ್ತಿದ್ದಾರೆ. ಎಲ್ಲ ನೇಮಕಾತಿಯಲ್ಲಿ ಅಕ್ರಮ ನಡೆದು ಯುವಕರ ಭವಿಷ್ಯ ನಾಶವಾಗುತ್ತಿದೆ.ಕೋಮುಗಲಭೆ ಸೃಷ್ಟಿಸುತ್ತಿದ್ದೀರ. ಶಿವಮೊಗ್ಗದಲ್ಲಿ ಕೋಮುಗಲಭೆಯಿಂದ ಸಣ್ಣ ವ್ಯಾಪಾರಿಗಳಿಗೆ 300 ಕೋಟಿ ರೂ. ನಷ್ಟವಾಗಿದೆ. ಇದು ತೆರಿಗೆ ಪಾವತಿಸುವ ವ್ಯಾಪಾರಿಗಳೇ ಹೊರತು ಅದಾನಿ ಅಂಬಾನಿಗೆ ಆಗಿರುವ ನಷ್ಟ ಇದಲ್ಲ. ಇವರ ಆಡಳಿತದಲ್ಲಿ ರಸ್ತೆ ಗುಂಡಿಗೆ ಸಾವು ಸಂಭವಿಸುತ್ತಿದೆ. ಸರ್ಕಾರ ಇನ್ನಾದರೂ ಕಮಿಷನ್ ಹೊಡೆಯುವುದನ್ನು ನಿಲ್ಲಿಸಲಿ. ಫ್ಲೈಓವರ್ ಚಾಲನೆಯಾದ ಒಂದೇ ವಾರದಲ್ಲಿ ಮುಚ್ಚುತ್ತೀರಿ. ನಿಮ್ಮ ಯೋಗ್ಯತೆಗೆ ಒಂದು ಫ್ಲೈಓವರ್ ಕಟ್ಟಲು ಸಾಧ್ಯವಿಲ್ಲ.
ಇಷ್ಟೆಲ್ಲಾ ಆಗುತ್ತಿದ್ದರೂ ಬಿಜೆಪಿಯವರಿಗೆ ಸಿದ್ದರಾಮಯ್ಯ ಏನು ತಿಂದರು, ಡಿ.ಕೆ. ಶಿವಕುಮಾರ್ ಏನು ಹೇಳಿದರು ಎಂಬುದರ ಮೇಲೆ ಆಸಕ್ತಿ ಇದೆ. ಕರ್ನಾಟಕದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಾರ್ವಕರ್, ಹಿಂದುತ್ವ ಎಂಬಂತೆ ಭಾವಿಸಿದ್ದಾರೆ.
ಸರ್ಕಾರ ರಥೋತ್ಸವದ ಡ್ರಾಮಾ ನಿಲ್ಲಿಸಿ, ರೈತರು, ಯುವಕರು, ಜನಸಾಮಾನ್ಯರ ಕಣ್ಣೀರು ಒರೆಸಲಿ.
ಈಶ್ವರಪ್ಪ ಅವರ ಪ್ರಕರಣದಲ್ಲಿ ಬಿ ರಿಪೋರ್ಟ್ ವಿರುದ್ಧ ಮೇಲ್ಮನವಿ ಸಲ್ಲಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಪ್ರಕರಣದಲ್ಲಿ ಪ್ರಮುಖ ಆರೋಪಿಯ ವಿಚಾರಣೆ ನಡೆಸದೇ ಪ್ರಕರಣವನ್ನು ಹೇಗೆ ಮುಚ್ಚಿಹಾಕಲು ಸಾಧ್ಯ? ಹೀಗಾಗಿ ಅವರ ಅರ್ಜಿಯಲ್ಲಿ ಅರ್ಥವಿದೆ’ ಎಂದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಸಚಿವ ಮುನಿರಸತ್ನ ಅವರ ಮೇಲೆ ಮಾಡಿರುವ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈ ವಿಚಾರದಲ್ಲಿ ನಾವು ಆರೋಪ ಮಾಡಿದಾಗ ಸಾಕ್ಷಿ ಕೊಡಿ ಎಂದು ಕೇಳುತ್ತಾರೆ. ಈಗ ರಾಜ್ಯ ಸರ್ಕಾರದ ನೋಂದಣಿಯಾಗಿರುವ, ರಾಜ್ಯ ಸರ್ಕಾರದ ಕಾಮಗಾರಿಗಳನ್ನು ಮಾಡುವ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಸಚಿವರುಗಳ ಮೇಲೆ ನೇರ ಆರೋಪ ಮಾಡುತ್ತಿರುವಾಗ ಇದಕ್ಕಿಂತ ಬೇರೆ ಸಾಕ್ಷಿ ಮತ್ತೇನು ಬೇಕು? ಮುಖ್ಯಮಂತ್ರಿಗಳು ನಮ್ಮನ್ನು ಕರೆಸಿ ಚರ್ಚೆ ಮಾಡಲಿ. ನಾವು ದಾಖಲೆಗಳನ್ನು ನೀಡಲು ಸಿದ್ಧರಿದ್ದೇವೆ ಎಂದು ಕೆಂಪಣ್ಣ ಅವರೇ ಹೇಳಿದ್ದು, ಇದು ಯಾಕೆ ಆಗಿಲ್ಲ. ಈ ಸರ್ಕಾರ ನಿಜಕ್ಕೂ ತಪ್ಪು ಮಾಡಿಲ್ಲವಾದರೆ ಅವರಿಂದ ದಾಖಲೆ ಪಡೆದು, ಅದರ ತನಿಖೆಗೆ ಒಂದು ವಿಶೇಷ ತನಿಖಾ ತಂಡ ರಚನೆ ಮಾಡಿಲ್ಲ ಯಾಕೆ?ಇವರು ತಮಗೆ ತಾವೇ ನಿರಪರಾಧಿಗಳು ಎಂದು ಸರ್ಟಿಫಿಕೇಟ್ ಕೊಟ್ಟುಕೊಳ್ಳುತ್ತಿರುವುದೇಕೆ? ಬಿಜೆಪಿಗೆ ವಲಸಿಗ ಮಂತ್ರಿಗಳು ಅನಿವಾರ್ಯವಾಗಿದ್ದಾರೆ. ಪ್ರವಾಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮಂತ್ರಿಗಳಿಗೆ ಪರಿಪರಿಯಾಗಿ ಬೇಡಿಕೊಂಡರು ಯಾರೂ ಹೋಗಲಿಲ್ಲ. ಕೊನೆಗೆ ಮುಖ್ಯಮಂತ್ರಿಗಳು ಜಿಲ್ಲಾ ಪರಿಶಿಲನಾ ಸಭೆ ಮಾಡಿ ಮಂತ್ರಿಗಳಿಗೆ ವರದಿ ನೀಡಬೇಕಾಯಿತು. ಆಪರೇಷನ್ ಕಮಲ ಮಾಡಿದ ಬಿಜೆಪಿ ಈಗ ಅನುಭವಿಸುತ್ತಿದೆ. ಉಪ್ಪು ತಿಂದ ಮೇಲೆ ನೀರು ಕುಡಿಯಬೇಕಲ್ಲವೇ?’ ಎಂದರು.
ಕೆಂಪಣ್ಣ ಅವರಿಗೆ ಬೆದರಿಕೆ ಇದೆ ಎಂಬ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವ ಇವರಿಗೆ ಕೇಂದ್ರ ಸರ್ಕಾರ ವಿಸಿಲ್ ಬ್ಲೋವರ್ ಕಾಯ್ದೆ ಅಡಿಯಲ್ಲಿ ರಕ್ಷಣೆ ನೀಡಬೇಕು’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷರಾದ ಶ್ರೀ ರಮೇಶ್ ಬಾಬು ಉಪಸ್ಥಿತರಿದ್ದರು…