ಮಧ್ಯಪ್ರದೇಶ ಹೈಕೋರ್ಟ್ನ ಗ್ವಾಲಿಯರ್ ಪೀಠದ ಮುಂದೆ ಅತ್ಯಂತ ಅಚ್ಚರಿಯ ಪ್ರಕರಣವೊಂದು ಬಂದಿದೆ. ಇಲ್ಲಿ ಇಬ್ಬರು ಸ್ವಂತ ಅಕ್ಕ-ತಂಗಿಯರು ತಮ್ಮ ತಮ್ಮ ಪತಿಯಂದಿರನ್ನು ಪರಸ್ಪರ ಅದಲು-ಬದಲು (Exchange) ಮಾಡಿಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆಯು ನ್ಯಾಯಾಲಯವನ್ನು ಬೆಚ್ಚಿಬೀಳಿಸಿದ್ದಲ್ಲದೆ, ಇಡೀ ಗ್ವಾಲಿಯರ್ ನಗರದಲ್ಲಿ ಈಗ ದೊಡ್ಡ ಚರ್ಚೆಯ ವಿಷಯವಾಗಿದೆ.
ಈ ಪ್ರಕರಣವು ಆರಂಭದಲ್ಲಿ ‘ಅಪಹರಣ’ದ ಆರೋಪದೊಂದಿಗೆ ಶುರುವಾಗಿತ್ತು. ದತಿಯಾ ಮೂಲದ ವ್ಯಕ್ತಿಯೊಬ್ಬರು ಹೈಕೋರ್ಟ್ನಲ್ಲಿ ‘ಹೇಬಿಯಸ್ ಕಾರ್ಪಸ್’ (Habeas Corpus) ಅರ್ಜಿ ಸಲ್ಲಿಸಿ, ತನ್ನ ಪತ್ನಿ ಮತ್ತು ಮಗಳನ್ನು ತನ್ನ ಭಾವ (ಹೆಂಡತಿಯ ತಂಗಿಯ ಗಂಡ) ಮಾಯಾರಾಮ್ ಅಪಹರಿಸಿದ್ದಾನೆ ಎಂದು ದೂರಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಹಾಜರುಪಡಿಸುವಂತೆ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿತ್ತು.
ಪೊಲೀಸರು ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಆಕೆ ನೀಡಿದ ಹೇಳಿಕೆ ಎಲ್ಲರನ್ನೂ ದಂಗಾಗಿಸಿತು. “ನನ್ನನ್ನು ಯಾರೂ ಅಪಹರಿಸಿಲ್ಲ, ನಾನು ನನ್ನ ಸ್ವಂತ ಇಚ್ಛೆಯಿಂದಲೇ ಮಾಯಾರಾಮ್ ಜೊತೆ ವಾಸಿಸುತ್ತಿದ್ದೇನೆ. ಈಗಾಗಲೇ ನನ್ನ ಪತಿಗೆ ವಿಚ್ಛೇದನ ನೀಡಲು ಅರ್ಜಿ ಸಲ್ಲಿಸಿದ್ದೇನೆ” ಎಂದು ಆಕೆ ತಿಳಿಸಿದಳು.
ಇಲ್ಲಿ ಇನ್ನೊಂದು ಟ್ವಿಸ್ಟ್ ಎಂದರೆ, ಮಾಯಾರಾಮ್ನ ಪತ್ನಿ (ಅರ್ಜಿದಾರನ ತಂಗಿ) ಇದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಬದಲಾಗಿ, “ನನ್ನ ಅಕ್ಕ ನನ್ನ ಗಂಡನ ಜೊತೆ ಇರುವುದಕ್ಕೆ ನನಗೆ ಯಾವುದೇ ಅಭ್ಯಂತರವಿಲ್ಲ” ಎಂದು ಆಕೆ ನ್ಯಾಯಾಲಯಕ್ಕೆ ತಿಳಿಸಿದಳು. ಅಷ್ಟೇ ಅಲ್ಲದೆ, ಆಕೆ ಕೂಡ ತನ್ನ ಭಾವನ (ಅಕ್ಕನ ಮೊದಲ ಪತಿ) ಜೊತೆ ವಾಸಿಸುವ ಇಚ್ಛೆಯನ್ನು ವ್ಯಕ್ತಪಡಿಸಿದಳು!
ವಿಚಾರಣೆ ಮುಂದುವರಿದಂತೆ, ಇಬ್ಬರೂ ಮಹಿಳೆಯರು ತಾವು ಈಗಿನ ದಾಂಪತ್ಯ ಜೀವನದಲ್ಲಿ ಅತೃಪ್ತರಾಗಿದ್ದೇವೆ ಮತ್ತು ಪರಸ್ಪರ ಸಂಗಾತಿಗಳನ್ನು ಬದಲಾಯಿಸಿಕೊಳ್ಳುವ ಮೂಲಕ ಹೊಸ ಜೀವನ ಆರಂಭಿಸಲು ಬಯಸುತ್ತೇವೆ ಎಂದು ಹೇಳಿದರು. ಈ ಇಬ್ಬರೂ ಮಹಿಳೆಯರಿಗೆ ಮಕ್ಕಳಿದ್ದಾರೆ ಎಂಬುದು ಗಮನಾರ್ಹ.
ಎಲ್ಲಾ ಹೇಳಿಕೆಗಳನ್ನು ಆಲಿಸಿದ ಹೈಕೋರ್ಟ್, ಇಬ್ಬರೂ ಮಹಿಳೆಯರು ವಯಸ್ಕರಾಗಿದ್ದು (Adults), ತಮ್ಮ ಜೀವನದ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುವ ಹಕ್ಕು ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿತು. ಇದು ಅಪಹರಣ ಪ್ರಕರಣವಲ್ಲ, ಬದಲಾಗಿ ವೈಯಕ್ತಿಕ ಕೌಟುಂಬಿಕ ವಿಚಾರವಾಗಿದ್ದು ಇದರಲ್ಲಿ ಯಾವುದೇ ಅಪರಾಧ ನಡೆದಿಲ್ಲ ಎಂದು ಹೇಳಿದ ನ್ಯಾಯಾಲಯ, ಪತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.








