ಬೆಂಗಳೂರು : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿನ ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ಇಂದು ಪರಿಕ್ಷೆ ನಡೆಯಲಿದ್ದು, ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಹತ್ವದ ಮಾಹಿತಿ ನೀಡಿದೆ.
ಕೆಪಿಟಿಸಿಎಲ್ ನಲ್ಲಿ ಖಾಲಿ ಇರುವ ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ಆಗಸ್ಟ್ 7 ರಂದು ಪರೀಕ್ಷೆ ನಡೆಯಲಿದೆ. ಪಿಎಸ್ ಐ ನೇಮಕಾತಿ ಪರೀಕ್ಷೆ ವೇಳೆ ಅಕ್ರಮದ ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರತಿ ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ನಡೆಸುತ್ತಿದ್ದು, ಕೆಪಿಟಿಸಿಎಲ್ ಪರೀಕ್ಷೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ನಡೆಸಲು ಮುಂಜಾಗ್ರತಾ ಕ್ರಮ ಕೈಗೊಂಡಿದೆ.
ಇಂದು ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆ ನಡೆಯಲಿದ್ದು, ಇದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಡ್ರೆಸ್ ಕೋಡ್ ಕಡ್ಡಾಯ ಮಾಡಿದೆ. ಕಿರಿಯ ಇಂಜಿನಿಯರ್ ಮತ್ತು ಸಹಾಯಕ ಇಂಜಿನಿಯರ್ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ಬರೆಯಲು ತಮಗೆ ಹಂಚಿಕೆಯಾಗಿರುವ ಎರಡು ಪರೀಕ್ಷಾ ಕೇಂದ್ರಗಳ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ.
ಅಭ್ಯರ್ಥಿಗಳು ಎನ್ 95 ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದದು, ಪೂರ್ಣ ತೋಳಿನ ಶರ್ಟ್ ಧರಿಸಲು ಅವಕಾಶ ಇಲ್ಲ. ಕುರ್ತಾ ಪೈಜಾಮ, ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬಟನ್ ಹೊಂದಿರುವ ಡ್ರೆಸ್ ಗಳನ್ನು ಧರಿಸುವಂತಿಲ್ಲ. ಪ್ರವೇಶ ಪತ್ರದ ಜೊತೆಗೆ ಸರ್ಕಾರದಿಂದ ಮಾನ್ಯವಾದ ಪೋಟೋ ಐಡಿ ಕಾರ್ಡ್ ನ್ನು ಅಗತ್ಯವಾಗಿ ತೋರಿಸಬೇಕು.
ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಈ ನಿಯಮಗಳ ಪಾಲನೆ ಕಡ್ಡಾಯವಾಗಿದ್ದು, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ವಾಚ್, ಮೊಬೈಲ್ ಸೇರಿ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳು, ಆಭರಣ, ಶೂ, ಧರಿಸಿ ಬರುವುದನ್ನು ಕರ್ನಾಟ ಪರೀಕ್ಷಾ ಪ್ರಾಧಿಕಾರ ನಿಷೇಧಿಸಿದೆ.