ಬೆಂಗಳೂರು : ರಾಜ್ಯದ ಪ್ರತಿ ಶಾಲೆಯಲ್ಲಿ ಮಕ್ಕಳ ಸುರಕ್ಷತಾ ಸಮಿತಿ ರಚಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ರಾಜ್ಯದ ಎಲ್ಲ ಶಾಲೆಗಳಲ್ಲಿ ಪೋಕ್ಸೋ ಕಾಯ್ದೆ ಸಮರ್ಪಕ ಅನಷ್ಠಾನಗೊಳಿಸಲು ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ, ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಶಾಲೆಗಳಲ್ಲಿ ಪೋಕ್ಸೋ ಕಾಯ್ದೆ ಸಮರ್ಪಕ ಅನುಷ್ಠಾನಕ್ಕೆ ಸಾರ್ವನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಮಕ್ಕಳ ಸುರಕ್ಷತಾ ಸಮಿತಿಯಲ್ಲಿ ಶಾಲಾ ಮುಖ್ಯಸ್ಥರು, ಶಾಲೆಯ ಆಡಳಿತ ಮಂಡಳಿ ಈ ಸಮಿತಿ ಅಧ್ಯಕ್ಷರಾಗಿದ್ದು, ಕನಿಷ್ಟ ಇಬ್ಬರು ಶಿಕ್ಷಕರು, ಮೂವರು ಪೋಷಕರು, ಎಸ್ ಡಿಎಂಸಿ ಅಧ್ಯಕ್ಷರು, ಇಬ್ಬರು ಮಕ್ಕಳು, ಒಬ್ಬರು ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಇರಬೇಕು ಎಂದು ತಿಳಿಸಿದೆ.
ಪ್ರತಿ ಶಾಲೆಯಲ್ಲೂ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಮತ್ತು ಇತ್ತೀಚಿಗೆ ಬಿಡುಗಡೆ ಮಾಡಿರುವ 14499 ಟೋಲ್ ಫ್ರೀ ಸಂಖ್ಯೆ ಬರೆಸುವುದು. ಎಲ್ಲ ಶಾಲೆಗಳಲ್ಲಿ ದೂರು ಮತ್ತು ಸಲಹಾ ಪೆಟ್ಟಿಗೆಯನ್ನು ಸ್ಥಾಪಿಸುವುದು. ಶಾಲಾ ಅವಧಿ ಹಾಗೂ ತರಗತಿವಾರು ವೇಳಾಪಟ್ಟಿ ಮತ್ತು ಅನುಮೋದಿತ ವಿಶೇಷ ತರಗತಿಗಳ ವೇಳಾಪಟ್ಟಿಯನ್ನು ಪೋಷಕರಿಗೆ ನೀಡಬೇಕು ಎಂದು ತಿಳಿಸಿದೆ.