ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು 15 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ನೇಮಕ ಪರೀಕ್ಷೆಯ ಫಲಿತಾಂಶವನ್ನು ಆಗಸ್ಟ್ ಅಂತ್ಯದೊಳಗೆ ನೀಡುವ ಗುರಿ ಇದೆ. ಅಕ್ಟೋಬರ್ ಅಂತ್ಯದೊಳಗೆ ನೇಮಕ ಪ್ರಕ್ರಿಯೆಯ ಪಟ್ಟಿಯನ್ನು ಬಿಡುಗಡೆ ಮಾಡುವ ಗುರಿ ಇದೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
“ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಕಾಲ ಇಲಾಖೆಯ ಜವಾಬ್ದಾರಿ ವಹಿಸಿಕೊಂಡು ಒಂದು ವರ್ಷ ಪೂರ್ಣಗೊಂಡಿದ್ದು, ಇಲಾಖೆಯಲ್ಲಿ ಸುಧಾರಣೆ, ಬದಲಾವಣೆ, ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ” ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ತಿಳಿಸಿದರು.
ಶಿಕ್ಷಣ ಇಲಾಖೆಯ ಜವಾಬ್ದಾರಿ ವಹಿಸಿಕೊಂಡು ಆಗಸ್ಟ್ 7ಕ್ಕೆ ‘ಒಂದು ವರ್ಷ’ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಲಾಖೆಯಲ್ಲಿ ಆಗಿರುವ ಪ್ರಗತಿಯ ಮಾಹಿತಿಯನ್ನು ಸಚಿವರು ಹಂಚಿಕೊಂಡಿದ್ದಾರೆ..
- ಕಳೆದ ವರ್ಷ ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ಮಕ್ಕಳ ಶೈಕ್ಷಣಿಕ ಭವಿಷ್ಯ ಗಮನದಲ್ಲಿಟ್ಟುಕೊಂಡು ಮುಂಜಾಗ್ರತಾ ಕ್ರಮಗಳೊಂದಿಗೆ ಭೌತಿಕ ತರಗತಿಗಳನ್ನು ಆರಂಭಿಸಲಾಗಿದೆ. ಬೇರೆ ಬೇರೆ ರಾಜ್ಯಗಳು ತರಗತಿ ಆರಂಭಿಸಲು ಹಿಂಜರಿಯುತ್ತಿದ್ದವು. ಆದರೆ, ನಮ್ಮ ರಾಜ್ಯದಲ್ಲಿ ಆರಂಭದಲ್ಲೇ ಭೌತಿಕ ತರಗತಿಗಳನ್ನು ಆರಂಭಿಸಲಾಯಿತು. ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಈ ವಿಚಾರದಲ್ಲಿ ಇಡೀ ಶಿಕ್ಷಣ ಇಲಾಖೆ ಅದರಲ್ಲೂ ಶಿಕ್ಷಕರ ಪಾತ್ರ ಅತ್ಯಂತ ಶ್ಲಾಘನೀಯ.
- ಕೋವಿಡ್-19 ಕಾರಣ ಶಾಲಾ ಮಕ್ಕಳಲ್ಲಿ ಉಂಟಾಗಿರುವ ಕಲಿಕಾ ಹಿನ್ನಡೆ ಸರಿದೂಗಿಸಲು ದೇಶದಲ್ಲೇ ಮೊದಲು ‘ಕಲಿಕಾ ಚೇತರಿಕೆ’ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಲಿಕಾ ಚೇತರಿಕೆ ಕಾರ್ಯಕ್ರಮ ದೇಶಕ್ಕೆ ಮಾದರಿಯಾಗಿದೆ ಎಂದು ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
- ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮತ್ತು ಸುಧಾರಣೆ ತರಲಿರುವ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
- ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು 15 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ನೇಮಕ ಪರೀಕ್ಷೆಯ ಫಲಿತಾಂಶವನ್ನು ಆಗಸ್ಟ್ ಅಂತ್ಯದೊಳಗೆ ನೀಡುವ ಗುರಿ ಇದೆ. ಅಕ್ಟೋಬರ್ ಅಂತ್ಯದೊಳಗೆ ನೇಮಕ ಪ್ರಕ್ರಿಯೆಯ ಪಟ್ಟಿಯನ್ನು ಬಿಡುಗಡೆ ಮಾಡುವ ಗುರಿ ಇದೆ.
- ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ 8,101 ಕೊಠಡಿ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ.
- ಅತಿಥಿ ಉಪನ್ಯಾಸಕರ ಗೌರವ ಸಂಭಾವನೆಯನ್ನು 3,000 ರೂ. ಹೆಚ್ಚಳ ಮಾಡಲಾಗಿದೆ.
- ಅತಿಥಿ ಶಿಕ್ಷಕರ ಗೌರವ ಸಂಭಾವನೆ 2,500 ರೂ. ಹೆಚ್ಚಳ ಮಾಡಲಾಗಿದೆ.
- ಅಕ್ಷರ ದಾಸೋಹ ಬಿಸಿಯೂಟ ನೌಕರರ ಗೌರವ ಸಂಭಾವನೆಯನ್ನು 1 ಸಾವಿರ ರೂ. ಹೆಚ್ಚಳ ಮಾಡಲಾಗಿದೆ.
- 2022-23ನೇ ಸಾಲಿನಲ್ಲಿ 32,159 ಅತಿಥಿ ಶಿಕ್ಷಕರ ಸೇವೆಯನ್ನು ಪಡೆಯಲಾಗುತ್ತಿದೆ.
- 2022-23ನೇ ಸಾಲಿನಲ್ಲಿ ಪಿಯು ಕಾಲೇಜುಗಳಿಗೆ 3,708 ಅತಿಥಿ ಉಪನ್ಯಾಸಕರ ಸೇವೆಯನ್ನು ಪಡೆಯಲಾಗುತ್ತಿದೆ.
- 1ರಿಂದ 8ನೇ ತರಗತಿಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ‘ಪ್ರಧಾನಮಂತ್ರಿ ಪೋಷಣ್ ಶಕ್ತಿ ಅಭಿಯಾನ’ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ/ಬಾಳೆಹಣ್ಣು/ಚಿಕ್ಕಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.
- ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆದೊಯ್ಯಲು ಶಾಲಾ ವಾಹನ ಖರೀದಿಗೆ ‘ಶಾಸಕರ ಪ್ರದೇಶಾಭಿವೃದ್ಧಿ ನಿಧಿ’ ಬಳಸಿಕೊಳ್ಳಲು ಅನುಮತಿಸಲಾಗಿದೆ.
- ಮುಂಬಡ್ತಿ ಸಂಬಂಧಿಸಿದಂತೆ ಸರ್ಕಾರಿ ಶಾಲೆಗಳ ಶಿಕ್ಷಕರ ಹಲವು ವರ್ಷಗಳ ಬೇಡಿಕೆ ಈಡೇರಿಸಲಾಗಿದೆ.
- ಸರ್ಕಾರಿ ಪಿಯು ಕಾಲೇಜುಗಳಿಗೆ ವಿದ್ಯಾರ್ಥಿಯನಿಯರ ದಾಖಲಾತಿ ಶುಲ್ಕ ಪಾವತಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
- ಕೌನ್ಸಿಲಿಂಗ್ ಮೂಲಕ 23 ಸಾವಿರಕ್ಕೂ ಹೆಚ್ಚು ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ.
- ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ಅವರ ಸೇವಾನುಭವದ ಆಧಾರದ ಮೇಲೆ ಮುಂಬಡ್ತಿ ಬೇಡಿಕೆ ಈಡೇರಿಸಲಾಗುತ್ತಿದೆ.
- ಅನುದಾನಿತ ಶಾಲೆಗಳಲ್ಲಿ 2015ರ ಡಿಸೆಂಬರ್ 31ರ ಪೂರ್ವದಲ್ಲಿ ಖಾಲಿಯಾಗಿರುವ ಬೋಧಕರ ಹುದ್ದೆಗಳ ಭರ್ತಿಗೆ ಅನುಮತಿ ನೀಡಲಾಗಿದೆ. ಎರಡು ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸಾಧ್ಯವಾಗಲಿದೆ.
- ‘ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ’ಯನ್ನು ‘ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ’ ಎಂದು ಮರುನಾಮಕರಣ.
- ಖಾಸಗಿ ಶಾಲೆಗಳ ಕಟ್ಟಡಗಳ ಸುರಕ್ಷತೆ ಮತ್ತು ಅಗ್ನಿ ಸುರಕ್ಷತೆ ಪ್ರಕ್ರಿಯೆ ಸರಳೀಕರಿಸಲಾಗಿದೆ.
- ಸರ್ಕಾರಿ ಶಾಲೆಗಳ ಆಸ್ತಿ ಸಂರಕ್ಷಣೆಗಾಗಿ ಇದೇ ಆಗಸ್ಟ್ನಿಂದ ಅಕ್ಟೋಬರ್ವರೆಗೆ ವಿಶೇಷ ಅಭಿಯಾನ ಮಾಡಲಾಗುತ್ತಿದೆ.
- ರಾಜ್ಯದ ಎಲ್ಲ ಗ್ರಂಥಾಲಯಗಳನ್ನು ಆಫ್ಲೈನ್ ಜೊತೆಗೆ ಆನ್ಲೈನ್ನಲ್ಲೂ ಲಭ್ಯವಿರುವಂತೆ, ಡಿಜಿಟಲೀಕರಣಗೊಳಿಸುವ ಉದ್ದೇಶವಿದೆ. ರಾಜ್ಯದ ಡಿಜಿಟಲ್ ಗ್ರಂಥಾಲಯಕ್ಕೆ ಕೇಂದ್ರ ಪಂಚಾಯತ್ ರಾಜ್ ಇಲಾಖೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
- ವರ್ಷಕ್ಕೆ ಎರಡು ಟಿಇಟಿ ಪರೀಕ್ಷೆ ನಡೆಸಬೇಕು ಎನ್ನುವ ಗುರಿ ಇದೆ. ಆದರೆ, ಈ ವರ್ಷ 15 ಸಾವಿರ ಶಿಕ್ಷಕರ ನೇಮಕ ಪರೀಕ್ಷೆ ಪ್ರಕ್ರಿಯೆ ನಡೆಯುತ್ತಿರುವ ಕಾರಣ ಒಂದೇ ಟಿಇಟಿ ನಡೆಯಲಿದೆ. ಇದೇ ನವೆಂಬರ್ 6ರಂದು ಟಿಇಟಿ ಪರೀಕ್ಷೆ ನಡೆಯಲಿದೆ.
- ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿನ ಮಕ್ಕಳಿಗೆ ‘ಸ್ಪೋಕನ್ ಇಂಗ್ಲೀಷ್’ ತರಗತಿಗಳನ್ನು ಆರಂಭಿಸುವ ಉದ್ದೇಶವಿದ್ದು, ಮುಂದಿನ ದಿನಗಳಲ್ಲಿ ಮಾದರಿ ಶಾಲೆಗಳಲ್ಲಿ ಹಾಗೂ ಹೊಸ ನೇಮಕಾತಿಯಿಂದ ಲಭ್ಯವಾಗುವ ಇಂಗ್ಲೀಷ್ ಶಿಕ್ಷಕರ ಹುದ್ದೆಗಳ ಸಂಖ್ಯೆ ಆಧಾರದ ಮೇಲೆ ಹಂತ ಹಂತವಾಗಿ ಸ್ಪೋಕನ್ ಇಂಗ್ಲೀಷ್ ತರಗತಿ ಆರಂಭಿಸಲಾಗುತ್ತದೆ.
- ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಶಾಲೆಗಳಲ್ಲಿ ನೈತಿಕ ವಿಜ್ಞಾನ ತರಗತಿಗಳನ್ನು ಆರಂಭಿಸುವ ಉದ್ದೇಶವಿದೆ.