ಗದಗ: ದೇಶ, ನಾಡಿನೆಲ್ಲೆಡೆ ದಸರಾ ಸಂಭ್ರಮ ಕಳೆಗಟ್ಟಿದೆ. ಈ ವೇಳೆಯಲ್ಲಿಯೇ ನೈರುತ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಕರ್ನಾಟಕಕ್ಕೆ ಅವಮಾನ ಮಾಡಿರೋ ಘಟನೆ ವರದಿಯಾಗಿದೆ. ಅದರಲ್ಲೈ ಜೈ ಮಹಾರಾಷ್ಟ್ರ ಎಂದು ನಮೂದಾಗಿರುವಂತ ಟಿಕೆಟ್ ಗಳನ್ನು ಪ್ರಯಾಣಿಕರಿಗೆ ವಿತರಿಸಿ, ಮಹಾ ಎಡವಟ್ಟು ಮಾಡಲಾಗಿದೆ.
ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಇಂದು ಗದಗ ಘಟಕ ಹಾಗೂ ರೋಣಾ ಘಟಕದ ಸಾರಿಗೆ ಬಸ್ ನಲ್ಲಿ ವಿತರಿಸಿರುವಂತ ಟಿಕೆಟ್ ಗಳಲ್ಲಿ ಜೈ ಮಹಾರಾಷ್ಟ್ರ ಎಂಬುದಾಗಿ ಇದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ವಿತರಿಸಿದಂತ ಈ ಟಿಕೆಟ್ ಕಂಡು ಪ್ರಯಾಣಿಕರೇ ಧಂಗಾಗಿ ಹೋಗಿದ್ದಾರೆ.
ಅಂದಹಾಗೇ ಗದಗ ಘಟಕ ಹಾಗೂ ರೋಣಾ ಘಟಕಗಳ ಸಾರಿಗೆ ಬಸ್ ನ ಎರಡು ಕಡೆಗಳಲ್ಲಿ ಈ ಎಡವಟ್ಟು ಮಾಡಲಾಗಿದೆ ಎನ್ನಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಎಂಬುದಾಗಿ ನಮೂದಿಸಬೇಕಿದ್ದಂತ ಟಿಕೆಟ್ ಪೇಪರ್ ನಲ್ಲಿ ಜೈ ಮಹಾರಾಷ್ಟ್ರ ಎಂಬುದಾಗಿ ನಮೂದಿಸಿರೋ ರೋಲ್ ನ ಟಿಕೆಟ್ ಗಳನ್ನು ಪ್ರಯಾಣಿಕರಿಗೆ ನೀಡಲಾಗಿದೆ.
ಈ ಕುರಿತಂತೆ NWKRTCಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಲಾಗಿದ್ದು, ಗದಗ ವಿಭಾಗದ ರೋಣಾ ಮತ್ತು ಗದ ಘಟಕದಲ್ಲಿ ಇಟಿಎಂ ಟಿಕೇಟ್ ಗಳು ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಲಾಂಛನ ವಿರುವ ಟಿಕೆಟ್ ಗಳನ್ನು ನೀಡಿರೋ ಬಗ್ಗೆ ಪರಿಶೀಲಿಸಲಾಗಿದೆ. ಈ ಇಟಿಎಂ ರೋಲ್ ಗಳನ್ನು ಪೂರೈಕೆ ಮಾಡುವಂತ ನಜರ ಚೊಕಿನಿಂದ ಎರಡು ಬಾಕ್ಸ್ ಗಳು ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆಯವರಿಗೆ ಕಳುಹಿಸುವುದನ್ನು, ನಮ್ಮ ಸಂಸ್ಥೆಗೆ ಪೂರೈಕೆ ಮಾಡಿರುತ್ತಾರೆ. ಇದನ್ನು ಘಟಕಗಳಲ್ಲಿ ಪರಿಶೀಲನೆ ಮಾಡದೇ ನಿರ್ವಾಹಕರಿಗೆ ವಿತರಿಸಿರುತ್ತಾರೆ. ಆ ರೋಲ್ ಗಳನ್ನು ನಿರ್ವಾಹಕರು ನೋಡದೆ ಟಿಕೆಟ್ ನೀಡಿರುತ್ತಾರೆ ಎಂದಿದೆ.
ಹೀಗೆ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಇಟಿಎಂ ರೋಲ್ ಗಳನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ವಿತರಿಸಿರೋದು ಗಮನಕ್ಕೆ ಬಂದ ಕೂಡಲೇ, ರೋಣ ಘಟಕದಲ್ಲಿ 70 ರೋಲ್ ಗಳು ಹಾಗೂ ಗದಗ ಘಟಕದಲ್ಲಿ 60 ರೋಲ್ ಗಳನ್ನು ತಕ್ಷಣವೇ ಹಿಂಪಡೆಯಲಾಗಿದೆ. ರೋಲ್ ಬದಲಾವಣೆಯಲ್ಲಿ ತಪ್ಪೆಸಗಿದಂತವರ ಮೇಲೆ ಶಿಸ್ತಿನ ಕ್ರಮ ಜರುಗಿಸಲಾಗುತ್ತದೆ. ಪೂರೈಕೆ ಮಾಡಿದ ಸಂಸ್ಥೆಯ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.