ಬಳ್ಳಾರಿ : ಕಾರ್ಮಿಕರ ಭವಿಷ್ಯನಿಧಿ ಸಂಘಟನೆ (ಇಪಿಎಫ್ಒ) ಪಿಂಚಣಿದಾರರು ಐರಿಸ್ ಸ್ಕ್ಯಾನರ್ ಮೂಲಕ ಫಿಂಗರ್ ಪ್ರಿಂಟ್ ಸ್ಕ್ಯಾನರ್ನಂತಹ ಆಧಾರ್ ಆಧಾರಿತ ಬಯೋಮೆಟ್ರಿಕ್ ಸಾಧನಗಳನ್ನು ಬಳಸಿಕೊಂಡು ಡಿಜಿಟಲ್ ಜೀವನ್ ಪ್ರಮಾಣ ಪತ್ರ ಸಲ್ಲಿಸಬಹುದು ಎಂದು ಕಾರ್ಮಿಕರ ಭವಿಷ್ಯನಿಧಿ ಸಂಘಟನೆಯ ಕ್ಷೇತ್ರೀಯ ಭವಿಷ್ಯನಿಧಿಯ ಆಯುಕ್ತರಾದ ಕೆ.ವೆಂಕಟಸುಬ್ಬಯ್ಯ ಅವರು ತಿಳಿಸಿದ್ದಾರೆ.
ವೃದ್ಧಾಪ್ಯ ಅಥವಾ ಆರೋಗ್ಯ ಸಮಸ್ಯೆಗಳಿಂದಾಗಿ ಕೆಲವು ಪಿಂಚಣಿದಾರರು ತಮ್ಮ ಬಯೋಮೆಟ್ರಿಕ್ಸ್ (ಪಿಂಗರ್ ಪ್ರಿಂಟ್/ಐರಿಸ್) ಪಡೆಯುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ. ಜೀವಂತ ಪ್ರಮಾಣ ಪತ್ರವನ್ನು ನವೀಕರಿಸಲು ಪಿಂಚಣಿ ವಿತರಿಸುವ ಬ್ಯಾಂಕ್ ಶಾಖೆ, ಸಾಮಾನ್ಯ ಸೇವಾಕೇಂದ್ರ, ಪೋಸ್ಟ್ ಆಫೀಸ್ ಇತ್ಯಾದಿಗಳಂತಹ ಯಾವುದೇ ಏಜೆನ್ಸಿಗಳ ಭೌತಿಕವಾಗಿ ಭೇಟಿ ನೀಡಬೇಕು.
ಪಿಂಚಣಿದಾರರಿಗೆ ಅನುಕೂಲವಾಗುವಂತೆ, ಯುಐಡಿಅಐ ಡಿಜಿಟಲ್ ಲೈಫ್ ಪ್ರಮಾಣಪತ್ರವನ್ನು ಸಲ್ಲಿಸಲು ಫೇಸ್ ದೃಢೀಕರಣ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ವೃದ್ಧ್ಯಾಪ ಅಥವಾ ಆರೋಗ್ಯ ಸಮಸ್ಯೆಗಳಿಂದಾಗಿ ಪಿಂಚಣಿದಾರರು ತಮ್ಮ ಬಯೋಮೆಟ್ರಿಕ್ (ಬೆರಳಚ್ಚು, ಐರಿಸ್) ಸೆರೆಹಿಡಿಯುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಲ್ಲಿ ಮುಖದ ದೃಢೀಕರಣ ತಂತ್ರಜ್ಞಾನದ ಬಳಕೆಯು ವಿಶೇಷವಾಗಿ ಸಹಾಯಕವಾಗಬಹುದು. ಪಿಂಚಣಿದಾರರು ತಮ್ಮ ಡಿಜಿಟಲ್ ಜೀವಂತ ಪ್ರಮಾಣ ಪತ್ರವನ್ನು ಮನೆಯಲ್ಲಿಯೇ ಕುಳಿತು ಸಲ್ಲಿಸಬಹುದು.
ಮೊಬೈಲ್ನಲ್ಲಿ ಜೀವನ್ ಪ್ರಮಾಣ ಪತ್ರ ಫೇಸ್ ಅಪ್ಲಿಕೇಷನ್ಗಾಗಿ www.jeevanpramaan.gov.in/pachage/download ಗೆ ಭೇಟಿ ನೀಡಬಹುದು ಎಂದು ಅವರು ತಿಳಿಸಿದ್ದಾರೆ.