ಧಾರವಾಡ : ಚರ್ಮಗಂಟು ರೋಗವು ಜಾನುವಾರುಗಳ ಆರೋಗ್ಯವನ್ನು ಹದಗೆಡಿಸಿ ಜಾನುವಾರುಗಳಲ್ಲಿನ ಉತ್ಪಾದಕತೆಯನ್ನು ಕುಂಠಿತಗೊಳಿಸುವುದರಿಂದ ರೈತರ ಹಾಗೂ ಜಾನುವಾರು ಮಾಲೀಕರ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಉಂಟಾಗುತ್ತದೆ. ಈ ರೋಗದಿಂದ ಉಂಟಾಗುವ ಜಾನುವಾರುಗಳ ಮರಣದ ನಷ್ಟವನ್ನು ಭರಿಸಲು ರಾಜ್ಯಸರ್ಕಾರವು ಪರಿಹಾರ ಮೊತ್ತವನ್ನು ಘೋಷಿಸಿದೆ. ಪ್ರತಿ ಹೈನು ರಾಸುಗಳಿಗೆ ಗರಿಷ್ಠ ರೂ.20,000/- ಮತ್ತು ಎತ್ತುಗಳಿಗೆ ರೂ.30,000/- ಮತ್ತು ಕರುಗಳಿಗೆ ರೂ.5,000/- ಪರಿಹಾರ ಧನ ನೀಡಲು ರಾಜ್ಯಸರ್ಕಾರವು ಅಧಿಸೂಚನೆಯಲ್ಲಿ ತಿಳಿಸಿದೆ.
ರಾಜ್ಯದಲ್ಲಿ ಚರ್ಮಗಂಟು ರೋಗದಿಂದ (Lumpy Skin Disease) ಮರಣಿಸಿದ ಜಾನುವಾರುಗಳ ಮಾಲೀಕರಿಗೆ ಪರಿಹಾರ ಧನವನ್ನು ವಿತರಿಸಲು ಮಾರ್ಗಸೂಚಿಗಳು: ಚರ್ಮಗಂಟು ರೋಗಕ್ಕೆ ತುತ್ತಾಗಿ ಮರಣ ಹೊಂದಿದ ಜಾನುವಾರುವಿನ ಚಿಕಿತ್ಸಾ ಮಾಹಿತಿಯನ್ನು ಆಧರಿಸಿ ಸಂಬಂಧಪಟ್ಟ ಸ್ಥಳೀಯ ಪಶುವೈದ್ಯಾಧಿಕಾರಿಗಳಿಂದ ಜಾನುವಾರುವಿನ ಮರಣ ದೃಢೀಕರಣ ಪತ್ರ ಹೊಂದಿರುವುದು. ಚರ್ಮಗಂಟು ರೋಗದಿಂದ ಮರಣ ಹೊಂದಿದ ಜಾನುವಾರು ವಿಮಾ ಸೌಲಭ್ಯ ಹೊಂದಿದಲ್ಲಿ ಮರಣ ಪರಿಹಾರ ಧನವನ್ನು ಪಾವತಿಸತಕ್ಕದ್ದಲ್ಲ. ಪರಿಹಾರ ಧನವನ್ನು ಜಾನುವಾರು ಮಾಲೀಕರ ಆಧಾರ್ ಸಂಖ್ಯೆ ಜೋಡಿಸಲ್ಪಟ್ಟಿರುವ ಬ್ಯಾಂಕ್ ಖಾತೆಗೆ ಆರ್ ಟಿಜಿಎಸ್, ನೆಫ್ಟ್ ಮುಖಾಂತರ ನೇರವಾಗಿ ಪಾವತಿಸುವುದು. ಚರ್ಮಗಂಟು ರೋಗದಿಂದ ಮರಣ ಹೊಂದಿದ ಜಾನುವಾರುವಿನ ಸೂಕ್ತ ಛಾಯಚಿತ್ರಗಳು ಹಾಗೂ ಯುಐಡಿ ಇಯರ್ ಟ್ಯಾಗ್ ಅಪೇಕ್ಷಿತವಾಗಿರುತ್ತದೆ.
ಆಗಸ್ಟ್ 01, 2022 ರಿಂದ ಈ ಆದೇಶವನ್ನು ಹೊರಡಿಸಿದ ದಿನಾಂಕದವರೆಗೂ ಚರ್ಮಗಂಟು ರೋಗದಿಂದ ಮರಣಿಸಿದ ಜಾನುವಾರುಗಳ ಛಾಯಚಿತ್ರಗಳು ಲಭ್ಯವಿಲ್ಲದಿದ್ದ ಪಕ್ಷದಲ್ಲಿ, ಮರಣಿಸಿದ ಜಾನುವಾರುಗಳ ಮಾಲೀಕರಿಗೆ ಛಾಯಚಿತ್ರಗಳನ್ನು ಒದಗಿಸುವಂತೆ ಒತ್ತಾಯಿಸುವಂತಿಲ್ಲ. ಆಗಸ್ಟ್ 01, 2022 ರಿಂದ ಈ ಆದೇಶವನ್ನು ಹೊರಡಿಸಿದ ದಿನಾಂಕದವರೆಗೂ ಪಶುವೈದ್ಯಾಧಿಕಾರಿಗಳ ಗಮನಕ್ಕೆ ಬಾರದೇ ಚರ್ಮಗಂಟು ರೋಗಕ್ಕೆ ತುತ್ತಾಗಿ ಮರಣ ಹೊಂದಿ ಅಂತ್ಯಕ್ರಿಯೆಗೊಂಡಿದ್ದ ಪಕ್ಷದಲ್ಲಿ ಸ್ಥಳೀಯ ಪಶುವೈದ್ಯಾಧಿಕಾರಿಗಳು ಸಂಬಂಧಪಟ್ಟ ಗ್ರಾಮಪಂಚಾಯತಿ ಸದಸ್ಯರು ಹಾಗೂ ಮೂರು ಜನ ಸ್ಥಳೀಯ ಗ್ರಾಮಸ್ಥರ ಸಮಕ್ಷಮದಲ್ಲಿ ಪಂಚನಾಮೆ ಮಾಡಿ ಕಾಯಿಲೆಯಿಂದಲೇ ಜಾನುವಾರು ಮರಣ ಹೊಂದಿರುವುದಾಗಿ ಖಚಿತಪಟ್ಟಲ್ಲಿ ದೃಢೀಕರಣ ಪತ್ರ ನೀಡುವುದು. ಈ ಅನುದಾನವನ್ನು ನಿಯಮಾನುಸಾರ ಯಾವ ಉದ್ದೇಶಕ್ಕಾಗಿ ಬಿಡುಗಡೆ ಮಾಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಉಪಯೋಗಿಸಿಕೊಂಡು ಕಡ್ಡಾಯವಾಗಿ ಹಣಬಳಕೆ ಪುಮಾಣ ಪತ್ರವನ್ನು ಸಲ್ಲಿಸಬೇಕು.
ಸ್ವೀಕೃತಿ ರಸೀದಿ ಮೇಲೆ (Lumpy Skin Disease) ಹಣ ಪಡೆಯುವ ಅಧಿಕಾರಿಗಳು, ಆಯುಕ್ತರು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಬೆಂಗಳೂರು ರವರ ಮೇಲು ಸಹಿ ಪಡೆದು ಖಜಾನೆಯಿಂದ ಹಣ ಸೆಳೆಯಲು ಅನುಮತಿ ನೀಡಲಾಗಿದೆ ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ.