ಮಂಡ್ಯ : ಕಬ್ಬಿಗೆ ಬೆಂಬಲ ಬೆಲೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮಂಡ್ಯದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲಿಸಿ ಡಿ.19 ರ ಇಂದು, ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಮದ್ದೂರು ಬಂದ್ ಗೆ ಕರೆ ನೀಡಲಾಗಿದೆ ಎಂದು ಒಕ್ಕೂಟದ ಮುಖಂಡರು ತಿಳಿಸಿದ್ದಾರೆ.
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ರೈತ ಸಂಘ, ಹಾಲು ಉತ್ಪಾದಕರ ಹೋರಾಟ ಸಮಿತಿ, ತೆಂಗು ಬೆಳೆಗಾರರ ಸಂಘ, ವರ್ತಕರ ಸಂಘ, ಜಾಮೀಯಾ ಮಸೀದಿ ಸಮಿತಿ, ಒಕ್ಕಲಿಗರ ಸಂಘ, ದಲಿತ ಸಂಘಟನೆಗಳ ಬೆಂಬಲದೊಂದಿಗೆ ಮದ್ದೂರು ಬಂದ್ ಗೆ ಕರೆ ನೀಡಲಾಗಿದೆ ಎಂದು ಗೊರವನಹಳ್ಳಿ ಪ್ರಸನ್ನ ತಿಳಿಸಿದರು.
ಜನ ಸಾಮಾನ್ಯರ ಹಿತದೃಷ್ಟಿಯಿಂದ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ ಮಾತ್ರ ಬಂದ್ ಗೆ ಕರೆ ನೀಡಲಾಗಿದೆ. ಬಂದ್ ಹಿನ್ನೆಲೆಯಲ್ಲಿ ಪ್ರವಾಸಿ ಮಂದಿರದ ವೃತ್ತದಿಂದ ಶಿವಪುರದ ಧ್ವಜ ಸತ್ಯಾಗ್ರಹ ಸೌಧದವರೆಗೆ ಬೆಳಿಗ್ಗೆ 7 ಗಂಟೆ ಸುಮಾರಿಗೆ ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ನಂತರ ಮಧ್ಯಾಹ್ನದ ವೇಳೆಗೆ ಕಬ್ಬಿಗೆ ಬೆಂಬಲ ಬೆಲೆ ನಿಗದಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆ ಕುರಿತಂತೆ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು.
ಸಂಘಟನೆಗಳ ಮುಖಂಡರು ರ್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಮದ್ದೂರಿನ ಸಾರ್ವಜನಿಕರು ಹಾಗೂ ವರ್ತಕರು, ಬೀದಿ ಬದಿಯ ವ್ಯಾಪಾರಿಗಳು ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬಂದ್ ಗೆ ಬೆಂಬಲಿಸುವಂತೆ ಗೊರವನಹಳ್ಳಿ ಪ್ರಸನ್ನ ಮನವಿ ಮಾಡಿದರು.
ಸುದ್ದಿಗೊಷ್ಠಿಯಲ್ಲಿ ನ.ಲಿ.ಕೃಷ್ಣ, ಚನ್ನಸಂದ್ರ ಲಕ್ಷ್ಮಣ್, ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ