ಕೊಪ್ಪಳ : ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೋಂದಾಯಿಸಲು ರೈತರಿಗೆ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
2022-23ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಭತ್ತ ಮತ್ತು ಜೋಳ ಖರೀದಿಸುವ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಿಸೆಂಬರ್ 13 ರಂದು ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಟಾಸ್ಕ್ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಆದೇಶದಂತೆ 2022-23ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸಾಮಾನ್ಯ ಭತ್ತಕ್ಕೆ 2040 ರೂ. ಮತ್ತು ಗ್ರೇಡ್-ಎ ಭತ್ತಕ್ಕೆ 2060 ರೂ., ಹೈಬ್ರಿಡ್ ಬಿಳಿಜೋಳಕ್ಕೆ 2970 ರೂ., ಮಾಲ್ದಂಡಿ ಬಿಳಿಜೋಳಕ್ಕೆ 2990 ರೂ. ಹಾಗೂ ರಾಗಿಗೆ 3578 ರೂ. ಗಳನ್ನು ಬೆಂಬಲ ಬೆಲೆ ನಿಗದಿಪಡಿಸಿ ಆದೇಶಿಸಲಾಗಿರುತ್ತದೆ. ಅದರಂತೆ, ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಭತ್ತವನ್ನು 1 ಎಕರೆಗೆ 25 ಕ್ವಿಂಟಾಲ್ನಂತೆ ಗರಿಷ್ಠ 40 ಕ್ವಿಂಟಾಲ್ ಹಾಗೂ ಬಿಳಿಜೋಳ ಮತ್ತು ರಾಗಿಯನ್ನು 1 ಎಕರೆಗೆ 10 ಕ್ವಿಂಟಾಲ್ನಂತೆ ಗರಿಷ್ಠ 20 ಕ್ವಿಂಟಾಲ್ ಮೀರದಂತೆ ಖರೀದಿಸಬೇಕು ಎಂದು ಸರ್ಕಾರವು ಆದೇಶಿಸಿರುತ್ತದೆ ಎಂದರು.
ಈ ಯೋಜನೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯ ಗಂಗಾವತಿ, ಕೊಪ್ಪಳ, ಕಾರಟಗಿ, ಶ್ರೀರಾಮನಗರ, ಸಿದ್ದಾಪುರ ಕೇಂದ್ರಗಳ ಎಪಿಎಂಸಿ ಪ್ರಾಂಗಣಗಳಲ್ಲಿ ಹಾಗೂ ವೆಂಕಟಗಿರಿ, ನವಲಿ, ಕನಕಗಿರಿ, ಮರಳಿ ಹಾಗೂ ಹಿಟ್ನಾಳ ರೈತ ಸಂಪರ್ಕ ಕೇಂದ್ರ ಸೇರಿದಂತೆ ಒಟ್ಟು 10 ಭತ್ತ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ. ಅದರಂತೆ ಕೊಪ್ಪಳ, ಯಲಬುರ್ಗಾ, ಕುಷ್ಟಗಿ, ಕುಕನೂರಿನಲ್ಲಿ ಒಟ್ಟು 04 ಬಿಳಿಜೋಳ ಮತ್ತು ರಾಗಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದ್ದು, ಭತ್ತ, ಬಿಳಿಜೋಳ, ರಾಗಿ ಬೆಳೆದ ಎಲ್ಲಾ ರೈತರು ಸರ್ಕಾರದ ಆದೇಶದಂತೆ ಮೊದಲು ಕೃಷಿ ಇಲಾಖೆಯ ಫ್ರೂಟ್ ತಂತ್ರಾಂಶದ ಮೂಲಕ ನೋಂದಣಿ ಮಾಡಿಕೊಂಡು ನಂತರ ತಮ್ಮ ವ್ಯಾಪ್ತಿಗೆ ಬರುವ ಖರೀದಿ ಕೇಂದ್ರಗಳಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ತಿಳಿಸಲಾಗಿದೆ. ರೈತರ ನೋಂದಣಿ ಪ್ರಕ್ರಿಯೆಯು ಡಿಸೆಂಬರ್ 15 ರಿಂದ ಚಾಲ್ತಿಯಲ್ಲಿರುತ್ತದೆ ಎಂದರು.
ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಟಾಸ್ಕ್ಫೋರ್ಸ್ ಸಮಿತಿಯ ಎಲ್ಲಾ ಅಧಿಕಾರಿಗಳು ಸಮನ್ವಯ ಸಾಧಿಸಿಕೊಂಡು ರೈತರೊಂದಿಗೆ ಸರಿಯಾದ ರೀತಿಯಲ್ಲಿ ಯಾವುದೇ ಸಮಸ್ಯೆಯಾಗದಂತೆ ನಿಖರವಾಗಿ ಜಾಗೃತಿ ಮೂಡಿಸಲು ಹಾಗೂ ರೈತರಿಗೆ ಅನುಕೂಲವಾಗುವಂತೆ ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಆಹಾರ ಇಲಾಖೆ ಉಪನಿರ್ದೇಶಕರಾದ ಮಲ್ಲಿಕಾರ್ಜುನ ಅವರು ಮಾತನಾಡಿ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ಜೋಳ ಹಾಗೂ ರಾಗಿ ಖರೀದಿ ಪ್ರಕ್ರಿಯೆಯು 2023ರ ಜನವರಿ 01 ರಿಂದ ಮಾರ್ಚ್ 31 ರವರೆಗೆ ಚಾಲ್ತಿಯಲ್ಲಿರುತ್ತದೆ. ಆಸಕ್ತ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಹಾಗೂ ಈ ಬಗ್ಗೆ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.