ಬೆಂಗಳೂರು : ಇಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ನವದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಪಕ್ಷದ ಬೆಳವಣಿಗೆ ಕುರಿತು ಚರ್ಚಿಸಿದರು. ಇದೆ ವೇಳೆ ಎಐಸಿಸಿ ನಾಯಕರು ಒಪ್ಪಿದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸುತ್ತೇನೆ ಎಂದು ತಿಳಿಸಿದ್ದರು. ಇದೀಗ ಸಚಿವ ಸತೀಶ್ ಜಾರಕಿಹೊಳಿ ಅವರು ಕೂಡ 3 ವರ್ಷ ಮಂತ್ರಿ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ನಿಭಾಯಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಹೌದು ಕೆಪಿಸಿಸಿ ಅಧ್ಯಕ್ಷ ಪಟ್ಟದ ಮೇಲೆ ಸತೀಶ್ ಜಾರಕಿಹೊಳಿ ಇದೀಗ ಕಣ್ಣು ಇಟ್ಟಿದ್ದಾರೆ. ಹೈಕಮಾಂಡ್ ಮುಂದೆ ಸಚಿವ ಸತೀಶ್ ಜಾರಕಿಹೊಳಿ ಈ ಕುರಿತು ಪ್ರಸ್ತಾಪ ಮಾಡಿದ್ದು, ಸಚಿವ ಸ್ಥಾನದ ಜೊತೆಗೆ ಅಧ್ಯಕ್ಷ ಸ್ಥಾನ ನೀಡಿದರೆ ನಿಭಾಯಿಸುತ್ತೇನೆ ಎಂದು ತಿಳಿಸಿದ್ದಾರೆ. ಡಿಕೆ ಶಿವಕುಮಾರ್ ರೀತಿ ನನಗೂ ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿ. ಮೂರು ವರ್ಷ ಮಂತ್ರಿ ಸ್ಥಾನದ ಜೊತೆಗೆ ಅಧ್ಯಕ್ಷ ಗಾದಿಯನ್ನು ಸಹ ನಿಭಾಯಿಸುತ್ತೇನೆ ಪಕ್ಷದ ಸಾರಥ್ಯಕ್ಕೆ ನಾನು ರೆಡಿ ಅಂತ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಈ ವಿಚಾರವಾಗಿ ಕೆಸಿ ವೇಣುಗೋಪಾಲ, ಸುರ್ಜೆವಾಲಾ ಜೊತೆಗೆ ಮಾತನಾಡಿದ್ದು, ಮಂತ್ರಿ ಸ್ಥಾನದ ಜೊತೆಗೆ ಅಧ್ಯಕ್ಷ ಸ್ಥಾನ ನೀಡಲು ಹೈಕಮಾಂಡ್ ಹಿಂದೇಟು ಹಾಕುತ್ತಿದ್ದಾರೆ. ಒನ್ ಮ್ಯಾನ್ ಒನ್ ಪೋಸ್ಟ್ ವಿರುದ್ಧ ನಿರ್ಣಯಿಸಲ್ಲ. ಉದಯಪುರ ಡಿಕ್ಲರೇಷನ್ ಗೆ ವಿರುದ್ಧವಾಗಿ ನಿರ್ಧಾರ ಇಲ್ಲ ಅದು ಕಷ್ಟ ಸಾಧ್ಯ ಎಂದು ಹೈಕಮಾಂಡ್ ನಾಯಕರು ತಿಳಿಸಿದ್ದಾರೆ. ಈ ಬಗ್ಗೆ ರಾಹುಲ್ ಗಾಂಧಿ ಜೊತೆಗೆ ಚರ್ಚಿಸಿ ಮುಂದಿನ ನಿರ್ಧಾರ ತಿಳಿಸುವುದಾಗಿ ಹೈಕಮಾಂಡ್ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಹೇಳಿದೆ.