ಬೆಂಗಳೂರು : ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲಾ 16 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶಿಕ್ಷೆ ಪ್ರಕಟ ಮಾಡಿತ್ತು. ಶಿಕ್ಷೆ ಪ್ರಕಟ ಬೆನ್ನಲ್ಲೆ, ಶಾಸಕ ವಿನಯ್ ಕುಲಕರಣಿ ಕೋರ್ಟ್ ನಲ್ಲಿಯೇ ಕಣ್ಣೀರು ಹಾಕಿದ್ದರು.
ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಾಸಕ ವಿನಯ್ ಕುಲಕರ್ಣಿ, ನಿನ್ನೆ ರಾತ್ರಿ ಊಟ ನಿದ್ದೆ ಇಲ್ಲದೆ ಕಣ್ಣೀರು ಹಾಕಿದ್ದಾರೆ. ಅಷ್ಟೆ ಅಲ್ಲದೆ ನಟ ದರ್ಶನ್ ಇರುವ ಬ್ಯಾರಕ್ ಸಮೀಪದಲ್ಲಿಯೇ ಶಾಸಕ ವಿನಯ್ ಕುಲಕರ್ಣಿ ಅವರ ಬ್ಯಾರಕ್ ಕೂಡ ಇದ್ದು, ಒಂದೇ ಕಡೆ ಇದೀಗ ಇಬ್ಬರು ಇದ್ದಾರೆ. ಆದರೆ ವಿನಯ್ ಕುಲಕರ್ಣಿಗೆ ರಾಜಕೀಯ ಭವಿಷ್ಯದ ಜೊತೆಗೆ ಇನ್ನೊಂದು ಬಹುದೊಡ್ಡ ಚಿಂತೆ ಕಾಡುತ್ತಿದೆ.
ಹೌದು ವಿನಯ್ ಕುಲಕರ್ಣಿಗೆ ವಿಶೇಷವಾಗಿ ರಾಜಕೀಯ ಭವಿಷ್ಯವೇ ದೊಡ್ಡ ಪ್ರಶ್ನೆಯಾಗಿದ್ದು,ಅತ್ತ ಮತ್ತೊಂದು ದೊಡ್ಡ ಚಿಂತೆ ಎಂದರೆ ಕುಟುಂಬ, ಕುಟುಂಬದ ಸ್ಥಿತಿ ಹಾಗೂ ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬ ಆತಂಕವೂ ಅವರ ಮನಸ್ಸನ್ನು ಕಾಡುತ್ತಿದೆ. ಜನಪ್ರತಿನಿಧಿಯಿಂದ ಕೈದಿಯಾಗುವ ಈ ಬದಲಾವಣೆ, ಅವರ ಜೀವನದಲ್ಲಿ ದೊಡ್ಡ ತಿರುಗುಬಾಣವಾಗಿದ್ದು, ಜೈಲು ಬ್ಯಾರಕ್‌ನಲ್ಲಿ ಕಣ್ಣೀರಿನ ನಡುವೆ ಕಳೆಯುವಂತಾಗಿದೆ.
ಶಿಕ್ಷೆ ಪ್ರಕಟಕ್ಕು ಮುನ್ನ ಮೊನ್ನೆಯ ವಿಚಾರಣೆಯಲ್ಲಿ ಶಾಸಕ ವಿನಯ್ ಕುಲಕರ್ಣಿ ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಒಬ್ಬ ಮಗ ಇದ್ದಾನೆ ಇಬ್ಬರು ಹೆಣ್ಣು ಮಕ್ಕಳಿಗೂ ಮದುವೆ ಮಾಡಬೇಕು ಹಾಗಾಗಿ ನನಗೆ ಶಿಕ್ಷೆ ಪ್ರಮಾಣ ಕಡಿಮೆ ಮಾಡಿ ಎಂದು ಮನವಿ ಮಾಡಿ ಕಣ್ಣೀರು ಹಾಕಿದ್ದರು. ಅದರ ಜೊತೆಗೆ ಇತರ ಎಲ್ಲಾ ಆರೋಪಿಗಳು ನಮಗು ಕುಟುಂಬವಿದೆ, ಸಂಸಾರವಿದೆ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ, ವಯಸ್ಸಾದ ಅಪ್ಪ ಅಮ್ಮ ಇದ್ದಾರೆ ಎಂದು ಕಣ್ಣೀರು ಹಾಕಿ ಶಿಕ್ಷೆ ಪ್ರಮಾಣ ಕಡಿಮೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು.








