ಬೆಂಗಳೂರು: ದೇಶದಲ್ಲಿ ಇಂಧನ ಬಳಕೆ ಕಡಿತಗೊಳಿಸಲು ಹಾಗೂ ಚಿನ್ನದ ಖರೀದಿಯನ್ನು ಮುಂದೂಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಕರೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಧಾನಿಯವರ ಸಂದೇಶಕ್ಕೆ ಸಾರ್ವಜನಿಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ರಾಜಧಾನಿಯಲ್ಲಿ ಚಿನ್ನ, ಬೆಳ್ಳಿ ಹಾಗೂ ಇಂಧನ ಮಾರಾಟದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.
ಶೇ. 50 ರಷ್ಟು ಕುಸಿದ ಚಿನ್ನ-ಬೆಳ್ಳಿ ವ್ಯಾಪಾರ
ಪ್ರಧಾನಿ ಮೋದಿ ಅವರ ಮನವಿಯ ಬೆನ್ನಲ್ಲೇ ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿಯ ವ್ಯಾಪಾರದಲ್ಲಿ ಬರೋಬ್ಬರಿ ಶೇ. 50 ರಷ್ಟು ಇಳಿಕೆಯಾಗಿದೆ. ಸಾರ್ವಜನಿಕರು ಸದ್ಯದ ಮಟ್ಟಿಗೆ ಬಂಗಾರ ಖರೀದಿ ಪ್ರಕ್ರಿಯೆಯನ್ನು ಮುಂದೂಡುತ್ತಿರುವುದರಿಂದ ನಗರದ ಪ್ರಮುಖ ಜ್ಯುವೆಲ್ಲರಿ ಶೋರೂಮ್‌ಗಳು ಗ್ರಾಹಕರಿಲ್ಲದೆ ಭಣಗುಡುತ್ತಿವೆ.
ಮೆಟ್ರೋ, ಬಸ್‌ನತ್ತ ಜನರ ಮುಖ: ಪೆಟ್ರೋಲ್, ಡೀಸೆಲ್ ಮಾರಾಟವೂ ಇಳಿಕೆ
ಚಿನ್ನದ ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಲ್ಲೂ ಕೊಂಚ ಇಳಿಕೆ ದಾಖಲಾಗಿದೆ. ನಗರದ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ನಿತ್ಯ ಸರಾಸರಿ 150 ರಿಂದ 250 ಲೀಟರ್‌ಗಳಷ್ಟು ಇಂಧನ ಮಾರಾಟ ಕಡಿಮೆಯಾಗಿದೆ ಎಂದು ವರದಿಯಾಗಿದೆ. ಜನರು ತಮ್ಮ ಸ್ವಂತ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ, ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಸಾರಿಗೆ ಬಸ್‌ಗಳ ಮೂಲಕ ಪ್ರಯಾಣಿಸಲು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.








