ಬೆಂಗಳೂರು : ರಾಜ್ಯದ ಎಲ್ಲ ಸರ್ಕಾರಿ ಶಾಲಾ ಮಕ್ಕಳಿಗೆ 2026-27ನೇ ಸಾಲಿನಲ್ಲಿ ನೀಡಬೇಕಾದ ಉಚಿತ ಶೂ, ಸಾಕ್ಸ್ ಖರೀದಿಗೆ ಆಯಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ (ಎಸ್‌ಡಿಎಂಸಿ) ಹಣ ನೀಡುವ ಬದಲು ಟೆಂಡರ್ ಪ್ರಕ್ರಿಯೆ ಮೂಲಕ ಖರೀದಿಸಿ ನೀಡಲು ಸರ್ಕಾರ ತೀರ್ಮಾನಿಸಿದೆ.
ಸರ್ಕಾರಿ ಶಾಲೆಗಳಲ್ಲಿನ 1ರಿಂದ 10ನೇ ತರಗತಿವರೆಗಿನ 36.56 ಲಕ್ಷ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಖರೀದಿಗೆ 104 ಕೋಟಿ ರು. ಅನುದಾನ ವೆಚ್ಚಕ್ಕೆ ಶಿಕ್ಷಣ ಇಲಾಖೆ ಆಯುಕ್ತರಿಗೆ ಅನುಮತಿ ನೀಡಿದೆ. ಈ ಪೈಕಿ ಎಸ್‌ಡಿಎಂಸಿಯವರು ನಿರ್ಧರಿಸಿದರೆ ಅತಿ ಹೆಚ್ಚು ಮಳೆಯಾಗುವ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳ ಶಾಲೆಗಳ ಮಕ್ಕಳಿಗೆ ಶೂ ಬದಲು ಚಪ್ಪಲಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದೆ.
ಶೂ, ಸಾಕ್ಸ್ ಖರೀದಿಗೆ ಎಂಟು ವರ್ಷಗಳಿಂದ ಇರುವ ದರವನ್ನೇ ಈ ಬಾರಿಯೂ ಮುಂದುವರೆಸಲಾಗಿದೆ. ತರಗತಿವಾರು 1ರಿಂದ 5ನೇ ತರಗತಿ ಮಕ್ಕಳಿಗೆ ತಲಾ 265 ರು., 6 ರಿಂದ 8ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ 295 ರು., 9 ರಿಂದ 10ನೇ ತರಗತಿ ಮಕ್ಕಳಿಗೆ ತಲಾ 325 ರು. ನಿಗದಿಪಡಿಸಲಾಗಿದೆ.
2017-18ರಿಂದ ಟೆಂಡರ್ ಪ್ರಕ್ರಿಯೆ ಕೈಬಿಟ್ಟು ನೇರವಾಗಿ ಆಯಾ ಶಾಲಾ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೂ, ಸಾಕ್ಸ್ ಖರೀದಿಗೆ ಬೇಕಾದ ಹಣವನ್ನು ಎಸ್‌ಡಿಎಂಸಿಗಳಿಗೆ ನೀಡುತ್ತಾ ಬರುತ್ತಿತ್ತು. ಇದೀಗ ಎಂಟು ವರ್ಷಗಳ ಬಳಿಕ ಮತ್ತೆ ಟೆಂಡರ್ ಪ್ರಕ್ರಿಯೆ ಮೊರೆ ಹೋಗಿರುವುದು ಚರ್ಚೆಗೆ ಗ್ರಾಸವಾಗಿದೆ.








