ಬೆಂಗಳೂರು: ರಾಜ್ಯ ಸರ್ಕಾರದಿಂದ ತಳವಾರ ಮತ್ತು ಪರಿವಾರ ಜಾತಿಗಳನ್ನು ಪರಿಶಿಷ್ಟ ಪಂಗಡದ ಮೀಸಲಾತಿ ಪಟ್ಟಿಗೆ ಸೇರ್ಪಡೆ ಮಾಡಲಾಗಿತ್ತು. ಹೀಗಾಗಿ ಈಗ ರಾಜ್ಯದ ಹಿಂದುಳಿದ ವರ್ಗಗಳ ಮೀಸಲಾತಿ ಜಾತಿ ಪಟ್ಟಿಯಿಂದ ಕೈಬಿಟ್ಟು ಆದೇಶಿಸಿದೆ.
ಈ ಕುರಿತಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಗಳನ್ನು ಹೊರಡಿಸಿದ್ದು, ದಿನಾಂಕ 30-03-2002ರ ಕ್ರಮ ಸಂಖ್ಯೆ 88(ಹೆಚ್)ನಲ್ಲಿ ತಳವಾರ ಮತ್ತು 88(ಕೆ)ನಲ್ಲಿ ಪರಿವಾರ ನಾಯಕ ಜಾತಿಗಳಿಗೆ ಮೀಸಲಾತಿ ಕಲ್ಪಿಸಲಾಗಿರುತ್ತದೆ ಎಂದಿದ್ದಾರೆ.
ದಿನಾಂಕ 20-03-2020ರಂದು ಭಾರತ ಸರ್ಕಾರವು ಗೆಜೆಟ್ ಅಧಿಸೂಚನೆಯಲ್ಲಿ ಕರ್ನಾಟಕ ರಾಜ್ಯದ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿನ ಕ್ರಮ ಸಂಖ್ಯೆ 38ರಲ್ಲಿ ಪರಿವಾರ ಮತ್ತು ತಳವಾರ ಜಾತಿಗಳ್ನು ಸೇರಿಸಿರುವ ಹಿನ್ನಲೆಯಲ್ಲಿ, ಸದರಿ ಜಾತಿಗಳಿಗೆ ಸರ್ಕಾರವು ಪರಿಶಿಷ್ಟ ಪಂಗಡದ ಪ್ರಮಾಣ ಪತ್ರಗಳನ್ನು ವಿತರಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರರಿಗೆ ನಿರ್ದೇಶಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಭೆಯಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಿಂದ ಪ್ರವರ್ಗ-1ರಲ್ಲಿರುವ ತಳವಾರ ಮತ್ತು ಪರಿವಾರ ನಾಯಕ ಜಾತಿಗಳನ್ನು ತೆಗೆದು ಹಾಕಲು ಸರ್ವಾನುಮತದಿಂದ ತೀರ್ಮಾನಿಸಲಾಗಿದ್ದು, ಅದರಂತೆ ತಳವಾರ ಹಾಗೂ ಪರಿವಾರ ಜಾತಿಗಳನ್ನು ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಿಂದ ತೆಗೆದುಹಾಕಿ ಆದೇಶಿಸಿದ್ದಾರೆ.