ರಾಮನಗರ : ರಾಜ್ಯದಲ್ಲಿ ಈಗಾಗಲೇ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು, ಸಮೀಕ್ಷೆ ಮೊದಲ ದಿನದಿಂದಲೇ ಸರ್ವರ್ ಹಾಗೂ ಮೊಬೈಲ್ ತಾಂತ್ರಿಕ ದೋಷಗಳು ಕಂಡುಬಂದಿದ್ದವು. ಹೀಗಾಗಿ ಸಮೀಕ್ಷೆ ಸ್ವಲ್ಪ ಕುಂಠಿತವಾಗಿತ್ತು. ಆದರೆ ಇನ್ನೊಂದಡೆ ಶಿಕ್ಷಕಿ ಒಬ್ಬರು ಕೇವಲ 7 ದಿನಗಳಲ್ಲಿ ಶೇ. 100ರಷ್ಟು ಸಮೀಕ್ಷೆ ಪೂರ್ಣಗೊಳಿಸಿದ್ದಾರೆ.
ಹೌದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅಂಬಾಡಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶಾಂತಮ್ಮ ಅವರು ರಾಜ್ಯ ಸರ್ಕಾರದಿಂದ ಕೈಗೊಳ್ಳಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯವನ್ನು ಕೇವಲ 7 ದಿನಗಳಲ್ಲಿಯೇ ಪೂರ್ಣಗೊಳಿಸಿ ಶೇ.100ರಷ್ಟು ಸಾಧನೆ ಮಾಡಿದ್ದಾರೆ.
ಇಂದು ಅವರನ್ನು ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ತಮ್ಮ ಕಚೇರಿಯಲ್ಲಿ ಅಭಿನಂದಿಸಿ, ವೈಯಕ್ತಿವಾಗಿ 1,001 ರೂ.ಗಳ ನಗದು ಬಹುಮಾನ ನೀಡಿ ಶ್ರೀಮತಿ ಶಾಂತಮ್ಮ ಅವರ ಕಾರ್ಯವನ್ನು ಪ್ರಶಂಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಭಿನಂದನಾ ಪತ್ರ ಸಹ ನೀಡಿದ್ದಾರೆ.
ಸಮೀಕ್ಷೆಯಲ್ಲಿ ನೀವು ತೋರಿದ ಆಸಕ್ತಿ, ಉತ್ಸಾಹ ಮತ್ತು ಪ್ರಾಮಾಣಿಕ ಪ್ರಯತ್ನವು ಸಮೀಕ್ಷೆ ಕಾರ್ಯ ತ್ವರಿತವಾಗಿ ಸಾಗಲು ಸಹಕಾರಿಯಾಗಿದೆ. ಸಮೀಕ್ಷಾ ಕಾರ್ಯಕ್ಕೆ ನೀವು ನೀಡಿದ ಸಹಕಾರ ಮತ್ತು ಉತ್ಸಾಹವನ್ನು ಜಿಲ್ಲಾಡಳಿತವು ಪ್ರಶಂಸಿಸುತ್ತದೆ. ಹಾಗೂ ತಮ್ಮ ಈ ಕಾರ್ಯಶ್ರದ್ಧೆಗೆ ನನ್ನ ಸ್ವಂತ ಹಣದಿಂದ ಸ್ವ ಇಚ್ಛೆಯಾಗಿ 1,001 ರೂ.ಗಳನ್ನು ನೀಡಿ ಶ್ಲಾಘಿಸಲಾಗಿದೆ ಎಂದರು.