ಬೆಂಗಳೂರು : ಬಿಪಿಎಲ್ ಕುಟುಂಬಗಳಿಗೆ ಪಡಿತರ ಚೀಟಿ ವಿತರಣೆ, ಆದಾಯ ಪ್ರಮಾಣ ಪತ್ರ ವಿತರಣೆಗೆ ಹಾಲಿ ಇರುವ ಮಾನದಂಡ ಮತ್ತು ಪ್ರಕ್ರಿಯೆ ಪರಿಶೀಲಿಸಿ ಪರಿಷ್ಕರಿಸಲು ಸಲಹೆ ಸೂಚನೆ ನೀಡಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಲಾಗಿದೆ.
ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಈ ಕುರಿತು ಮಾಹಿತಿ ನೀಡಿದ್ದು, ಬಿಪಿಎಲ್ ಪಡಿತರ ಚೀಟಿ, ಆದಾಯ ಪ್ರಮಾಣ ಪತ್ರ ದುರ್ಬಳಕೆಗೆ ಕಡಿವಾಣ ಹಾಕಲು, ಸರ್ಕಾರದ ಬೊಕ್ಕಸಕ್ಕೆ ಅನಗತ್ಯ ವೆಚ್ಚ ತಗ್ಗಿಸಲು, ಅರ್ಹರಿಗೆ ಮಾತ್ರ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸುವುದು ಸಮಿತಿ ರಚನೆಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು ಕೂಡ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ಸುಳ್ಳು ಆದಾಯ ಪ್ರಮಾಣ ಪತ್ರ ಪಡೆದಿರುವ ದೂರುಗಳು ಗಮನಕ್ಕೆ ಬಂದಿದೆ. ಉಪಸಮಿತಿಯು ಬಿಪಿಎಲ್ ಕಾರ್ಡ್ ವಿತರಣೆಗೆ ಇರುವ ಮಾನದಂಡ ಪರಿಶೀಲನೆ, ಆದಾಯ ಪ್ರಮಾಣ ಪತ್ರ ನೀಡಲು ಇರುವ ಪ್ರಕ್ರಿಯೆಗಳು ಸೇರಿ ಸರ್ಕಾರಿ ಪ್ರಾಯೋಜಿತ ಯೋಜನೆಗಳ ಬಗ್ಗೆ ಪರಿಶೀಲಿಸಿ ಪರಿಷ್ಕರಣೆಗೆ ಸಲಹೆ ಸೂಚನೆ ನೀಡುವ ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ.