ಬೆಂಗಳೂರು : ಕಳೆದ ವರ್ಷ ಜೂನ್ ನಲ್ಲಿ ನಗರದ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಳೆದ ವರ್ಷ ಜೂನ್‌ನಲ್ಲಿ ಆರ್‌ಸಿಬಿ (RCB) ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತದಲ್ಲಿ 11 ಜನರ ಸಾವನ್ನಪಿದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸದಂತೆ ವಿಧಿಸಿರುವ ಮಧ್ಯಂತರ ಆದೇಶವನ್ನು ಹೈಕೋರ್ಟ್ ವಿಸ್ತರಣೆ ಮಾಡಿದೆ.
ಎಫ್‌ಐಆರ್ ರದ್ದು ಕೋರಿ ಆರ್‌ಸಿಬಿ, ಕೆಎಸ್‌ಸಿಎ ಮತ್ತು ಡಿಎನ್‌ಎ ಸಂಸ್ಥೆಗಳು ಸಲ್ಲಿಸಿರುವ ಅರ್ಜಿ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು. ಈ ವೇಳೆ ಎಸ್‌ಪಿಪಿ ಬಿ.ಟಿ.ವೆಂಕಟೇಶ್, ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಲು ಅನುಮತಿ ಕೋರಿ ಸರ್ಕಾರ ಮೆಮೋ ಸಲ್ಲಿಸಿದೆ. ಅದನ್ನು ಪರಿಗಣಿಸಿ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.
ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆರ್‌ಸಿಬಿ ಪರ ವಕೀಲರು, ಅಂತಿಮ ವರದಿ ಸಲ್ಲಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶವಿದೆ. ಹಾಗಾಗಿ ಎಫ್‌ಐಆರ್ ರದ್ದು ಕೋರಿರುವ ನಮ್ಮ ವಾದ ಮೊದಲು ಪರಿಗಣಿಸಬೇಕು. ಕ್ರೀಡಾಂಗಣದ ಹೊರಗಿನ ಘಟನೆಗೆ ಸಂಸ್ಥೆಗಳನ್ನು ಹೊಣೆ ಮಾಡಬಾರದು. ತಮ್ಮ ಅರ್ಜಿ ತೀರ್ಮಾನಿಸದೇ ಆರೋಪಪಟ್ಟಿಗೆ ಅನುಮತಿ ನೀಡಬಾರದು ಎಂದು ಕೋರಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ವಿಚಾರಣೆ ಮಾ.16 ಕ್ಕೆ ಮುಂದೂಡಿ, ಅಲ್ಲಿಯವರೆಗೆ ಅಂತಿಮ ವರದಿ ಸಲ್ಲಿಸದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಣೆ ಮಾಡಿತು. ಜತೆಗೆ ಮಾ. 14 ರೊಳಗೆ ಸರ್ಕಾರ ಆಕ್ಷೇಪಣೆ ಮತ್ತು ದಾಖಲೆಗಳನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿತು.








