ನವದೆಹಲಿ: ಶಾಲಾ ಶಿಕ್ಷಕರ ಅರ್ಹತೆಗೆ ಸಂಬಂಧಿಸಿದಂತೆ ದೇಶದ ಅತ್ಯುನ್ನತ ನ್ಯಾಯಾಲಯ ಮಹತ್ವದ ತೀರ್ಪೊಂದನ್ನು ನೀಡಿದೆ. ಪ್ರಸ್ತುತ ಸೇವೆಯಲ್ಲಿರುವ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಕಡ್ಡಾಯ ಎಂದು ಸುಪ್ರೀಂಕೋರ್ಟ್ ಮತ್ತೊಮ್ಮೆ ಖಡಕ್ ಆಗಿ ಹೇಳಿದೆ. ಆದರೆ, ಶಿಕ್ಷಕರಿಗೆ ಕೊಂಚ ನಿರಾಳತೆ ತರುವ ಸುದ್ದಿಯೆಂದರೆ, ಪರೀಕ್ಷೆ ಪಾಸ್ ಮಾಡಲು ನೀಡಲಾಗಿದ್ದ ಸಮಯವನ್ನು 2028ರ ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ.
‘ಅಂಜುಮಾನ್ ಇಶಾತ್ ಇ-ತಲೀಮ್ ಟ್ರಸ್ಟ್’ ಪ್ರಕರಣದ ಹಳೆಯ ತೀರ್ಪನ್ನು ಪ್ರಶ್ನಿಸಿ ವಿವಿಧ ರಾಜ್ಯ ಸರ್ಕಾರಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರ ಸಂಘಟನೆಗಳು ಒಟ್ಟು 65 ಪುನರ್ ಪರಿಶೀಲನಾ ಅರ್ಜಿಗಳನ್ನು ಸಲ್ಲಿಸಿದ್ದವು. ಈ ಎಲ್ಲಾ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ದೀಪಾಂಕರ್ ದತ್ತಾ ಮತ್ತು ಮನಮೋಹನ್ ಸಿಂಗ್ ಅವರಿದ್ದ ದ್ವಿಸದಸ್ಯ ಪೀಠವು ಸಾರಾಸಗಟಾಗಿ ವಜಾಗೊಳಿಸಿದೆ. ಅಲ್ಲದೆ, ಗುಣಮಟ್ಟದ ಶಿಕ್ಷಣದ ದೃಷ್ಟಿಯಿಂದ ಟಿಇಟಿ ಕಡ್ಡಾಯ ಎಂಬ ತನ್ನ ಹಳೆಯ ಆದೇಶವನ್ನು ಎತ್ತಿ ಹಿಡಿದಿದೆ.
2009ರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (RTE) ಜಾರಿಗೆ ಬರುವ ಮುನ್ನವೇ ಶಿಕ್ಷಕರಾಗಿ ಕೆಲಸಕ್ಕೆ ಸೇರಿದವರಿಗೂ ಟಿಇಟಿ ಕಡ್ಡಾಯ ಮಾಡಲಾಗಿತ್ತು. ಹಾಗೆಯೇ 2025ರ ಸೆಪ್ಟೆಂಬರ್ 1ರ ವೇಳೆಗೆ ನಿವೃತ್ತಿಗೆ 5 ವರ್ಷ ಬಾಕಿ ಇರುವ ಶಿಕ್ಷಕರೂ ಈ ಪರೀಕ್ಷೆ ಬರೆಯಬೇಕು ಎಂದು 2025ರಲ್ಲಿ ಕೋರ್ಟ್ ಆದೇಶಿಸಿತ್ತು. ಈ ನಿಯಮಗಳನ್ನು ಸಡಿಲಗೊಳಿಸುವಂತೆ ಶಿಕ್ಷಕರು ಮಾಡಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಒಪ್ಪಿಲ್ಲ.
ಲಭ್ಯವಿರುವ ಸಮಯ ಮತ್ತು ಸಂಪನ್ಮೂಲಗಳನ್ನು ಬಳಸಿಕೊಂಡು ಸಂಬಂಧಪಟ್ಟ ಇಲಾಖೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ಆದಷ್ಟು ಬೇಗ ಟಿಇಟಿ ಪರೀಕ್ಷೆಗಳನ್ನು ನಡೆಸಬೇಕು. ಸದ್ಯಕ್ಕೆ ಗಡುವನ್ನು 2028ರ ಆಗಸ್ಟ್ 28ರವರೆಗೆ (ಅಂತಿಮವಾಗಿ ಆಗಸ್ಟ್ 31) ವಿಸ್ತರಿಸಲಾಗುತ್ತಿದ್ದು, ಇದಾದ ನಂತರ ಯಾವುದೇ ಕಾರಣಕ್ಕೂ ಮತ್ತೊಮ್ಮೆ ಕಾಲಾವಕಾಶ ನೀಡುವುದಿಲ್ಲ.” ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಸುಪ್ರೀಂಕೋರ್ಟ್ನ ಈ ಹೊಸ ಆದೇಶದಿಂದಾಗಿ ಟಿಇಟಿ ಪಾಸ್ ಮಾಡದ ಶಿಕ್ಷಕರು ತಮ್ಮ ಉದ್ಯೋಗ ಉಳಿಸಿಕೊಳ್ಳಲು 2028ರ ಒಳಗಾಗಿ ಪರೀಕ್ಷೆ ಎದುರಿಸಿ ಉತ್ತೀರ್ಣರಾಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.








