ಬೆಂಗಳೂರು : ನಟ ರಿಷಬ್ ಶೆಟ್ಟಿ ನಟನೆಯ ಕಾಂತರಾ ಚಾಪ್ಟರ್ 1 ಚಿತ್ರದ ದೈವ ಪಾತ್ರದ ಬಗ್ಗೆ ಅವಮಾನಕಾರಿ ಸನ್ನೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಹೈಕೋರ್ಟ್ ಮತ್ತೆ ರಿಲೀಫ್ ನೀಡಿದೆ. ಈ ಒಂದು ಪ್ರಕರಣವನ್ನು ರದ್ದುಗೊಳಿಸುವಂತೆ ರಣವೀರ್ ಸಿಂಗ್ ಕಳೆದ ವಾರ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಮುಂದಿನ ವಿಚಾರಣೆಯವರೆಗೂ ರಣವೀರ್ ಸಿಂಗ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನೀಡಿದ್ದ ಆದೇಶವನ್ನು ಹೈಕೋರ್ಟ್ ವಿಸ್ತರಿಸಿದೆ.
ತನ್ನ ವಿರುದ್ಧ ದಾಖಲಾಗಿರುವ ಖಾಸಗಿ ದೂರು ಮತ್ತು ಅದರ ಮುಂದುವರಿದ ಭಾಗವಾಗಿ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ರಣವೀರ್ ಸಿಂಗ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಈ ಹಿಂದೆ ನೀಡಿದ್ದ ಆದೇಶ ವಿಸ್ತರಿಸಿ ಆದೇಶಿಸಿತು.
ಪ್ರಕರಣದ ಹಿನ್ನೆಲೆ
ಗೋವಾದಲ್ಲಿ ಕಳೆದ 2025ರ ನ.28ರಂದು ನಡೆದಿದ್ದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ರಣವೀರ್ ಸಿಂಗ್, ಕಾಂತಾರ ಚಾಪ್ಟರ್-1 ಕುರಿತು ಮಾತನಾಡಿದ್ದರು. ಈ ವೇಳೆ ಚಿತ್ರದ ಕರವಾಳಿ ಕರ್ನಾಟಕ ಭಾಗದ ಪಂಜುರ್ಲಿ/ಗುಳಿಗ ದೈವದ ದೈವಿಕ ಅಭಿವ್ಯಕ್ತಿಗಳನ್ನು ಒರಟು, ಹಾಸ್ಯಮಯ ಮತ್ತು ಅವಹೇಳನಕಾರಿ ರೀತಿಯಲ್ಲಿ ಸನ್ನೆ ಮೂಲಕ ಅನುಕರಿಸಿದ್ದಾರೆ.
ಚಾವುಂಡಿ ದೈವವನ್ನು ಹೆಣ್ಣು ದೆವ್ವ ಎಂದು ಕರೆದು ಅಪಮಾನ ಮಾಡಿದ್ದಾರೆ. ಇದರಿಂದ ಚಾಮುಂಡಿ ದೈವ ಭಕ್ತರ ಮನಸ್ಸಿಗೆ ನೋವಾಗಿದೆ. ಆ ಮೂಲಕ ರಣವೀರ್, ಲಕ್ಷಾಂತರ ಭಕ್ತರ ಧಾರ್ಮಿಕ ಮನೋಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಸಮಾಜದಲ್ಲಿ ವಿಭಿನ್ನ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಪ್ರಚೋದನೆ ಮಾಡಿದ್ದಾರೆ ಎಂದು ಆರೋಪಿಸಿ ಪ್ರಶಾಂತ್ ಮೆಥಲ್ ಎಂಬುವರು 1ನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದರು.
ಈ ದೂರಿನ ವಿಚಾರಣೆ ನಡೆಸಿದ್ದ ಸಿಜೆಎಂ ನ್ಯಾಯಾಲಯವು ತನಿಖೆ ನಡೆಸುವಂತೆ 2026ರ ಜ.23ರಂದು ಪೊಲೀಸರಿಗೆ ನಿರ್ದೇಶಿಸಿತ್ತು. ಅದರಂತೆ ಹೈಗ್ರೌಂಡ್ಸ್ ಠಾಣಾ ಪೊಲೀಸರು, ಬಿಎನ್‌ಎಸ್ ಸೆಕ್ಷನ್ 196, 299 ಮತ್ತು 302 ಅಡಿಯಲ್ಲಿ ವಿಭಿನ್ನ ಗುಂಪುಗಳ ನಡುವೆ ದ್ವೇಷ ಭಾವನೆಗೆ ಪ್ರಚೋದಿಸಿದ, ಧಾರ್ಮಿಕ ನಂಬಿಕೆಗಳನ್ನು ಅವಮಾನಿಸಿದ ಮತ್ತು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದರು. ವಿಚಾರಣೆಗೆ ಹಾಜರಾಗಲು ರಣವೀರ್‌ಗೆ ನೋಟಿಸ್ ನೀಡಿದ್ದರು. ಇದರಿಂದ ಪ್ರಕರಣ ರದ್ದತಿಗೆ ಕೋರಿ ರಣವೀರ್ ಹೈಕೋರ್ಟ್ ಮೊರೆ ಹೋಗಿದ್ದಾರೆ.








