ಬೆಂಗಳೂರು : ಬೆಂಗಳೂರಿನಲ್ಲಿ ಆರು ತಿಂಗಳ ಗರ್ಭಿಣಿ ಸೊಸೆಗೆ ಅತ್ತೆ ಹಾಗೂ ಮಾವ ಜಾತಿ ಬೇರೆಯಾಗಿದ್ದಕ್ಕೆ ಜಾತಿ ನಿಂದನೆ ಮಾಡಿ ಕಿರುಕುಳ ನೀಡಿದ್ದಾರೆ. ಈ ವಿಚಾರವಾಗಿ ಹೆತ್ತ ತಂದೆ ತಾಯಿಯ ವಿರುದ್ಧವೇ ಮಗ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಇದೀಗ ವರದಿಯಾಗಿದೆ.
ಹೌದು ನೆಲಮಂಗಲದಲ್ಲಿ ಅಂತರ-ಜಾತಿ ಪ್ರೇಮ ವಿವಾಹವಾದ ದಂಪತಿಗೆ ಪತಿಯ ಪೋಷಕರಿಂದ ಜಾತಿ ನಿಂದನೆ, ಕಿರುಕುಳ ಹಾಗೂ ಕೊಲೆ ಬೆದರಿಕೆ ಎದುರಾಗಿದೆ. 6 ತಿಂಗಳ ಗರ್ಭಿಣಿಯಾದ ಸೊಸೆಗೆ ಜೀವಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಮಗ ಅಭಿಷೇಕ್ ತನ್ನ ಪತ್ನಿಯ ರಕ್ಷಣೆಗಾಗಿ ಸ್ವಂತ ತಂದೆ-ತಾಯಿ ವಿರುದ್ಧ ನೆಲಮಂಗಲ ಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ.
ನೆಲಮಂಗಲದ ಸುಭಾಷ್ ನಗರದ ನಿವಾಸಿಗಳಾದ ಅಭಿಷೇಕ್ ಮತ್ತು ವಿದ್ಯಾಶ್ರೀ ಕಳೆದ ಎರಡು ವರ್ಷಗಳ ಹಿಂದೆ ಕೆಲಸ ಮಾಡುವ ಸ್ಥಳದಲ್ಲಿ ಪರಿಚಯವಾಗಿ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಮನೆಯವರ ವಿರೋಧವಿದ್ದರೂ, ಎಂಟು ತಿಂಗಳ ಹಿಂದೆ ಈ ಜೋಡಿ ಕರಿ ಕಾಟೇರಮ್ಮ ದೇವಾಲಯದಲ್ಲಿ ಸರಳವಾಗಿ ಮದುವೆಯಾಗಿದ್ದರು. ವಿದ್ಯಾಶ್ರೀ ಬೇರೆ ಜಾತಿಯವರು ಎಂಬ ಕಾರಣಕ್ಕೆ ಮದುವೆಯಾದ ದಿನದಿಂದಲೂ ಅಭಿಷೇಕ್ ಪೋಷಕರಾದ ಮುನಿಶಂಕರಯ್ಯ ಮತ್ತು ಆನಂದಮ್ಮ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಇದೀಗ ವಿದ್ಯಾಶ್ರೀ 6 ತಿಂಗಳ ಗರ್ಭಿಣಿಯಾಗಿದ್ದು, ಇಂತಹ ಸಂದರ್ಭದಲ್ಲೂ ಆಕೆಯನ್ನು ಮನೆಗೆ ಸೇರಿಸಿಕೊಳ್ಳದೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ. ಹಾಗಾಗಿ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಈ ಸಂಬಂಧ ಎನ್‌ಸಿಆರ್ (NCR) ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.








