ವಿಜಯನಗರ : ಪಟ್ಟಣದ ಹೊರವಲಯದಲ್ಲಿ ಭರತ ಹುಣ್ಣಿಮೆ ದಿನ ನಡೆದ ದೊಡ್ಡಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಕೋಟೆಪ್ಪ ‘ಮುತ್ತಿನ ರಾಶಿಗೆ ಮಂಜು ಮುಸುಕಿತಲೇ ಪರಾಕ್’ಎಂದು ದೈವವಾಣಿ ನುಡಿದರು.
9 ದಿನ ಉಪವಾಸ ವ್ರತ ಆಚರಿಸಿದ್ದ ಗೊರವಯ್ಯ ಕೋಟೆಪ್ಪ ಅವರನ್ನು ಪಾದಗಟ್ಟೆಯ ಮರಡಿಯಿಂದ ಮೆರವಣಿಗೆ ಮೂಲಕ ಕರೆತರಲಾಯಿತು. ಗೊರವಪ್ಪ ಸಂಜೆ 5.46ಕ್ಕೆ ಬಿಲ್ಲನ್ನೇರಿ ಸದ್ದಲೇ ಎನ್ನುತ್ತಿದ್ದಂತೆ ನೆರೆದವರೆಲ್ಲ ನಿಶ್ಯಬ್ದವಾದರು. ಕೆಲವೇ ಕ್ಷಣಗಳಲ್ಲಿ ಮೇಲಿನಂತೆ ಕಾರಣಿಕ ನುಡಿದು ಬೀಳುತ್ತಿದ್ದ ಕೋಟೆಪ್ಪನನ್ನು ಗೊರವ ಸಮೂಹ ಎತ್ತಿ ಹಿಡಿದರು.
ಪ್ರಸಕ್ತ ವರ್ಷದ ಮಳೆಗೆ ಸಮೃದ್ಧವಾಗಿ ಉತ್ತಮ ಫಸಲು ಬರುತ್ತದೆ. ಆದರೆ, ಇಳುವರಿ ಕುಂಠಿತ ಎಂಬ ಸಂದೇಶ ನೀಡಿದ್ದಾರೆ ಎಂದು ಭಕ್ತರು ತಿಳಿಸಿದರು. ಇನ್ನು ಅದೇ ರೀತಿಯಾಗಿ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕಾರ್ಣಿಕ ನುಡಿದಿದ್ದು, ನೀರಿನ ಕೊಡ ಉರಡತಲೆ ತುಪ್ಪದ ಕೊಡ ಉಕ್ಕತಲೆ ಪರಾಕ್ ಎಂದು 12 ಅಡಿ ಎತ್ತರದ ಬಿಲ್ಲೆರಿ ಗೊರವಯ್ಯ ಹನುಮಗೌಡ ಗುರೇಗೌಡರ ದೈವವಾಣಿ ನುಡಿದಿದ್ದಾರೆ.