ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರಿಗೆ ಜೈಲಾಧಿಕಾರಿಗಳಿಂದ ಕೊಂಚ ನಿರಾಳತೆ ಸಿಕ್ಕಿದೆ. ಜೈಲಿನ ನಿಯಮಾವಳಿಗಳ ಪ್ರಕಾರ ತಮ್ಮ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಅವರನ್ನು ಮುಖಾಮುಖಿಯಾಗಿ ಭೇಟಿಯಾಗಲು ಜೈಲಾಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಹಾಗಾಗಿ ಇಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗು ಪುತ್ರ ವಿನೀಶ್ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದಾರೆ. ಕಳೆದ ಮೇ 15 ರಂದು ಜೈಲು ಸೇರಿರುವ ನಟ ದರ್ಶನ್, ಕಾರಾಗೃಹದ ನಿಯಮಾವಳಿಗಳ ಅನ್ವಯ (Jail Manual) ತಮ್ಮ ಕುಟುಂಬಸ್ಥರನ್ನು ಭೇಟಿ ಮಾಡಲು ಅನುಮತಿ ಕೋರಿ ಜೈಲಾಧಿಕಾರಿಗಳಿಗೆ ಲಿಖಿತ ಪತ್ರವೊಂದನ್ನು ಬರೆದಿದ್ದರು. ಜೈಲಿಗೆ ಬರುವ ಪತ್ನಿ ಮತ್ತು ಮಗನೊಂದಿಗೆ ನಿಯಮಿತವಾಗಿ ಮಾತನಾಡಲು ಅವಕಾಶ ನೀಡಬೇಕು ಎಂದು ಅವರು ಈ ಪತ್ರದ ಮೂಲಕ ವಿನಂತಿಸಿದ್ದರು.
‘ಒಳಸಂದರ್ಶನ’ಕ್ಕೆ ವಿಶೇಷ ಮನವಿ
ಸಾಮಾನ್ಯವಾಗಿ ಜೈಲಿನಲ್ಲಿರುವ ಕೈದಿಗಳನ್ನು ನೋಡಲು ಬರುವ ಭೇಟಿಕಾರರಿಗೆ ಕಬ್ಬಿಣದ ಜಾಲರಿ ಅಥವಾ ಗ್ಲಾಸ್ ತಡೆಗೋಡೆಯ ಆಚೆ ನಿಂತು ಮಾತನಾಡಲು ಮಾತ್ರ ಅವಕಾಶವಿರುತ್ತದೆ. ಆದರೆ, ದರ್ಶನ್ ಅವರು ತಮ್ಮ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್ ಜೊತೆ ಯಾವುದೇ ಅಡೆತಡೆಯಿಲ್ಲದೆ ಮುಖಾಮುಖಿಯಾಗಿ ಕೂತು ಮಾತನಾಡಲು ಪ್ರತ್ಯೇಕ ವ್ಯವಸ್ಥೆ (ಒಳಸಂದರ್ಶನ) ಕಲ್ಪಿಸಿಕೊಡುವಂತೆ ಕೋರಿದ್ದರು. ಇದಕ್ಕೆ ಈಗ ಅಧಿಕಾರಿಗಳು ಸಮ್ಮತಿ ಸೂಚಿಸಿದ್ದಾರೆ.
ಮದುವೆ ವಾರ್ಷಿಕೋತ್ಸವದ ಭಾವನಾತ್ಮಕ ಕ್ಷಣ
ವಿಶೇಷವೆಂದರೆ, ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ಮದುವೆ ವಾರ್ಷಿಕೋತ್ಸವದ ಸಂದರ್ಭದಲ್ಲೇ ಈ ವಿಶೇಷ ಭೇಟಿಗೆ ಮನವಿ ಸಲ್ಲಿಕೆಯಾಗಿತ್ತು. ಜೈಲಿನ ಕತ್ತಲ ಕೋಣೆಯಲ್ಲಿ ಕಂಗೆಟ್ಟಿರುವ ನಟನಿಗೆ, ಮದುವೆ ವಾರ್ಷಿಕೋತ್ಸವದ ದಿನದಂದೇ ಹೆಂಡತಿ ಮತ್ತು ಮಗನ ಮುಖಾಮುಖಿ ಭೇಟಿ ಕೊಂಚ ಭಾವನಾತ್ಮಕ ನಿರಾಳತೆ ತಂದಿದೆ ಎಂದು ಹೇಳಲಾಗುತ್ತಿದೆ








