ಬೆಂಗಳೂರು : ಹಳೆಯ ಪಿಂಚಣಿ ಯೋಜನೆ (OPS) ಮರು ಜಾರಿಗೊಳಿಸುವ ಸಂಬಂಧ ಸರ್ಕಾರ ರಚಿಸಲಾಗಿದ್ದ ಸಮಿತಿಯಿಂದ ವಾರಾಂತ್ಯದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುವಂತೆ ಮನವಿ ಸಲ್ಲಿಸಲಾಗಿದೆ.
ಕರ್ನಾಟ ರಾಜ್ಯ ಸರ್ಕಾರಿ ನೌಕರರಿಗೆ 2006 ರಿಂದ ಜಾರಿಯಲ್ಲಿರುವ ಹೊಸ ಪಿಂಚಣಿ ಯೋಜನೆಯನ್ನು (NPS)ಹೋಗಲಾಡಿಸಿ ಈ ಹಿಂದಿನ ಹಳೆಯ ಪಿಂಚಣಿ ಯೋಜನೆಯನ್ನು (OPS) ಜಾರಿಗೊಳಿಸುವ ಸಂಬಂಧ, OPS ಯೋಜನೆ ಜಾರಿಗೊಳಿಸಿರುವ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರವು ಸಮಿತಿಯನ್ನು ರಚಿಸಿತ್ತು. ಈ ಸಂಬಂಧ ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸುವಂತೆ ಸಂಘವು ಸಮಿತಿಯನ್ನು ಒತ್ತಾಯಿಸುತ್ತಲೇ ಬಂದಿತ್ತು.
ದಿನಾಂಕ: 03-12-2025ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಹಾಗೂ ಪದಾಧಿಕಾರಿಗಳ ನಿಯೋಗವು NPS ಸಮಿತಿಯ ಸದಸ್ಯರು ಹಾಗೂ ಆರ್ಥಿಕ ಇಲಾಖೆಯ ಕಾರ್ಯದರ್ಶಿಗಳಾದ ಡಾ|| ಎಂ.ಟಿ. ರೇಜುರವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಸಂದರ್ಭದಲ್ಲಿ; ಇಡೀ ರಾಜ್ಯದ ನೌಕರರು NPS ರದ್ದುಪಡಿಸುವ ಸಂಬಂಧ ಒತ್ತಡ ಹಾಕುತ್ತಿದ್ದಾರೆ ಎಂಬ ಅಂಶವನ್ನೂ ಗಮನಕ್ಕೆ ತರಲಾಯಿತು. ಸಮಿತಿಯು ಈಗಾಗಲೇ ವರದಿಯನ್ನು ಸಿದ್ಧಪಡಿಸಿದ್ದು, ಈ ಸಂಬಂಧ ಒಂದು ವಾರದೊಳಗೆ ಸಮಿತಿಯ ಸಭೆಯನ್ನು ಏರ್ಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದಾಗಿ ತಿಳಿಸಿರುತ್ತಾರೆ.
NPS ಸಮಿತಿಯು ನೀಡಲಿರುವ ವರದಿಯನ್ನು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ರವರು ಪರಾಮರ್ಶಿಸಿ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಮಾಡಲಾಗಿದ್ದ ಘೋಷಣೆ ಹಾಗೂ ಸಂಘದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸಮಿತಿ ವರದಿ ನೀಡಿದ ಕೊಡಲೇ ಕ್ರಮವಹಿಸುವುದಾಗಿ ನೀಡಿದ್ದ ಭರವಸೆಯಂತೆ ರಾಜ್ಯ ಸರ್ಕಾರಿ ನೌಕರರಿಗೆ ಈ ಹಿಂದಿನಂತೆ ಹಳೆಯ ಪಿಂಚಣಿ ಯೋಜನೆಯನ್ನು (OPS) ಮರು ಜಾರಿಗೊಳಿಸುವಂತೆ ಸಮಸ್ತ ಸರ್ಕಾರಿ ನೌಕರರ ಪರವಾಗಿ ಸಂಘವು ಮತ್ತೊಮ್ಮೆ ಮನವಿ ಮಾಡಿದೆ.








