ಬೆಂಗಳೂರು : ಧರ್ಮದ ಹೆಸರಲ್ಲಿ ಸರ್ಕಾರಿ ಜಾಗ ಒತ್ತುವರಿ ಹಾಗೂ ದೇವರ ಹೆಸರಲ್ಲಿ ರಿಯಲ್ ಎಸ್ಟೇಟ್ ನಡೆಸಲು ಅವಕಾಶ ನೀಡಲಾಗದು ಎಂದು ಹೈಕೋರ್ಟ್ ಖಡಕ್ ತೀರ್ಪು ನೀಡಿದೆ. ಅರ್ಜಿಯೊಂದರ ವಿಚಾರಣೆ ನಡೆಸಿದ ಹೈಕೋರ್ಟ್ ಜಾಗ ಸರ್ಕಾರಕ್ಕೆ ಸೇರಿದ್ದು. ಸರ್ಕಾರಿ ಜಾಗದಲ್ಲಿ ನೀವು ಹಕ್ಕು ಸಾಧಿಸಲು ಬರುವುದಿಲ್ಲ. ಸರ್ಕಾರಿ ಜಾಗ ಇದ್ದಾಗ ನಿಮಗೆ ಯಾವುದೇ ರಕ್ಷಣೆ ಅಥವಾ ಪರಿಹಾರ ನೀಡಲಾಗದು ಎಂದು ಹೈಕೋರ್ಟ್ ಹೇಳಿತು.
ಕೋಲಾರ ತಾಲೂಕು ವೇಮಗಲ್ ಹೋಬಳಿಯ ಕ್ಯಾಲನೂರು ಗ್ರಾಮದ ಸರ್ಕಾರಿ ಶಾಲೆ ಕಾಂಪೌಂಡ್ ಗೋಡೆ ಹಾಗೂ ಗ್ರಾಮದ ರಸ್ತೆಯ ಸರ್ಕಾರಿ ಜಾಗದಲ್ಲಿ ಕಟ್ಟಲಾಗಿರುವ ಮಳಿಗೆಗಳ ತೆರವಿಗೆ ತಹಶೀಲ್ದಾರ್ ಜಾರಿಗೊಳಿಸಿರುವ ನೋಟಿಸ್ ಪ್ರಶ್ನಿಸಿ ಗ್ರಾಮದ ವಿರಾಟ್ ಹಿಂದೂ ಸೇವಾ ಚಾರಿಟೇಬಲ್ ಟ್ರಸ್ಟ್ (ರಿ) ಹಾಗೂ ಜಾಮೀಯಾ ಮಸ್ಜಿದ್ ಕಮಿಟಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ.
ಅರ್ಜಿದಾರರು ಮಳಿಗೆಗಳನ್ನು ಕಟ್ಟಿರುವ ಜಾಗ ಸರ್ಕಾರಿ ಜಮೀನು ಎಂದು ಗೊತ್ತಾದಾಗ, ಸರ್ಕಾರಿ ಜಾಗದಲ್ಲಿ ಧಾರ್ಮಿಕ ಸಂಸ್ಥೆಗಳ ಕೆಲಸ ಏನಿದೆ?, ಮಳಿಗೆಗಳನ್ನು ಕಟ್ಟಿ ಅವುಗಳನ್ನು ಬಾಡಿಗೆಗೆ ಕೊಟ್ಟು ಬಾಡಿಗೆ ವಸೂಲಿ ಮಾಡುತ್ತಿರುವುದು ಯಾವ ಆಧಾರದಲ್ಲಿ ಮತ್ತು ಯಾವ ಉದ್ದೇಶಕ್ಕೆ? ಇದು ದೇವರ ಹೆಸರಲ್ಲಿ ರಿಯಲ್ ಎಸ್ಟೇಟ್ ಅಲ್ಲದೆ ಮತ್ತೇನಿಲ್ಲ. ಈ ರೀತಿ ಧರ್ಮದ ಹೆಸರಲ್ಲಿ ಸರ್ಕಾರಿ ಜಾಗ ಅತಿಕ್ರಮಿಸುವುದಕ್ಕೆ ಮತ್ತು ದೇವರ ಹೆಸರಲ್ಲಿ ರಿಯಲ್ ಎಸ್ಟೇಟ್ಗೆ ಅವಕಾಶ ನೀಡಲಾಗದು.
ಹೀಗಿದ್ದಾಗ, ಮಳಿಗೆ ಕಟ್ಟಿ ಬಾಡಿಗೆ ವಸೂಲಿ ಮಾಡುವುದು ಏಕೆ? ಎರಡೂ ಧರ್ಮದವರು ಅರ್ಜಿ ಸಲ್ಲಿಸಿದ್ದಾರೆ. ‘ರಾಮ್-ರಹೀಮ್‘ ಸೇರಿ ಬಂದಿರುವುದೇ ಅನುಮಾನಗಳನ್ನು ಹುಟ್ಟುಹಾಕುತ್ತಿದೆ ಎಂದು ತಿಳಿಸಿತು.ಜಾಗ ಮಂಜೂರು ಪ್ರಸ್ತಾವನೆ ಜಿಲ್ಲಾಧಿಕಾರಿಗಳ ಮುಂದಿದ್ದರೆ ಅವರ ಬಳಿ ಹೋಗಿ, ಜಾಗ ಮಂಜೂರು ಮಾಡುವುದು ಅವರಿಗೆ ಬಿಟ್ಟಿದ್ದು. ಸದ್ಯಕ್ಕಂತೂ ಜಾಗ ಸರ್ಕಾರಕ್ಕೆ ಸೇರಿದ್ದು. ಸರ್ಕಾರಿ ಜಾಗದಲ್ಲಿ ನೀವು ಹಕ್ಕು ಸಾಧಿಸಲು ಬರುವುದಿಲ್ಲ. ಸರ್ಕಾರಿ ಜಾಗ ಇದ್ದಾಗ ನಿಮಗೆ ಯಾವುದೇ ರಕ್ಷಣೆ ಅಥವಾ ಪರಿಹಾರ ನೀಡಲಾಗದು ಎಂದು ನ್ಯಾಯಪೀಠ ಹೇಳಿತು.








