ಬೆಂಗಳೂರು: ರಾಜಧಾನಿಯ ನಾಗರಿಕರ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ನಗರದಲ್ಲಿ ಒಳಚರಂಡಿ ಮತ್ತು ಕುಡಿಯುವ ನೀರಿನ ಪೈಪ್ಲೈನ್ ಅಳವಡಿಸಲು ಖಾಸಗಿ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವ (Land Acquisition) ಅಗತ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಮೂಲಕ ಬೆಂಗಳೂರು ಜಲಮಂಡಳಿ (BWSSB)ಗೆ ಇದ್ದ ವಿಶೇಷ ಅಧಿಕಾರವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಏನಿದು ಹೈಕೋರ್ಟ್ ಮಹತ್ವದ ಆದೇಶ?
ಖಾಸಗಿ ಜಾಗದ ಮಾಲೀಕರು ಒಪ್ಪದಿದ್ದರೂ ಸಹ, ಸಾರ್ವಜನಿಕ ಹಿತದೃಷ್ಟಿಯಿಂದ ಅವರ ಭೂಮಿಯ ಅಡಿಯಲ್ಲಿ ಪೈಪ್ಲೈನ್ ಹಾಕಲು ಬಿಡಬ್ಲ್ಯುಎಸ್ಎಸ್ಬಿ ಕಾಯ್ದೆಯ ಸೆಕ್ಷನ್ 77 ಅವಕಾಶ ನೀಡುತ್ತದೆ. ಈ ನಿಯಮದ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ವಜಾಗೊಳಿಸಿದೆ.
ನ್ಯಾಯಾಲಯದ ಪ್ರಕಾರ, ಭೂಮಿಯ ಮಾಲೀಕತ್ವವು ಖಾಸಗಿ ವ್ಯಕ್ತಿಗಳ ಬಳಿಯೇ ಇರಲಿದೆ. ಕೇವಲ ಪೈಪ್ಲೈನ್ ನಿರ್ವಹಣೆ ಮಾಡುವ ಹಕ್ಕು ಮಾತ್ರ ಮಂಡಳಿಗೆ ಸಿಗುತ್ತದೆ. “ಇದು ಸಂವಿಧಾನ ನೀಡಿರುವ ಆಸ್ತಿ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ” ಎಂದು ಪೀಠವು ಅಭಿಪ್ರಾಯಪಟ್ಟಿದೆ. ಆದರೆ, ಕಾಮಗಾರಿ ನಡೆಸುವಾಗ ಜಾಗಕ್ಕಾಗಲಿ ಅಥವಾ ಮೇಲ್ಭಾಗದ ಕಟ್ಟಡಕ್ಕಾಗಲಿ ಯಾವುದೇ ನಷ್ಟ ಉಂಟಾದರೆ, ಅದಕ್ಕೆ ಸೂಕ್ತ ಪರಿಹಾರವನ್ನು ಪಡೆಯುವ ಹಕ್ಕು ಜಾಗದ ಮಾಲೀಕರಿಗೆ ಇರಲಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, “ಪೈಪ್ಲೈನ್ ಅಳವಡಿಸಿದ ಜಾಗದ ಸುತ್ತಮುತ್ತ ಯಾವುದೇ ಕಟ್ಟಡ ನಿರ್ಮಿಸದಂತೆ ಬಿಡಬ್ಲ್ಯುಎಸ್ಎಸ್ಬಿ ಕಾಯ್ದೆಯ ಸೆಕ್ಷನ್ 76ರ ಅಡಿಯಲ್ಲಿ ನಿರ್ಬಂಧ ಹೇರಲಾಗುತ್ತದೆ. ಇದು ಮಾಲೀಕರ ಜಮೀನು ಅಭಿವೃದ್ಧಿಪಡಿಸುವ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಆದ್ದರಿಂದ ಮಂಡಳಿಯು ಮಾರುಕಟ್ಟೆ ದರದಲ್ಲಿ ಸೂಕ್ತ ಪರಿಹಾರ ನೀಡಿ ಅಧಿಕೃತವಾಗಿ ಜಾಗವನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ವಾದಿಸಿದ್ದರು.








