ಬೆಂಗಳೂರು : ಒಂದು ಆವರಣದಲ್ಲಿ ಒಂದೇ ಮಾಧ್ಯಮದ 2ಕ್ಕಿಂತ ಹೆಚ್ಚಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ನಡೆಯುತ್ತಿದ್ದರೆ, ಅಂತಹ ಶಾಲೆಗಳನ್ನು ಗುರುತಿಸಿ ಒಂದೇ ಶಾಲೆಯನ್ನಾಗಿ ಮಾಡುವಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೂಚನೆ ನೀಡಿದ್ದಾರೆ.
ಈ ಸಂಬಂಧ ಟಿಪ್ಪಣಿ ಹೊರಡಿಸಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಉಪ ನಿರ್ದೇಶಕರು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ರಾಜ್ಯದಲ್ಲಿ ಒಂದೇ ಆವರಣದೊಳಗೆ ಒಂದೇ ಮಾಧ್ಯಮದ 2 ಕ್ಕೂ ಹೆಚ್ಚು ಪ್ರಾಥಮಿಕ/ಪ್ರೌಢಶಾಲೆಗಳನ್ನು ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳೊಂದಿಗೆ ನಡೆಯುತ್ತಿರುವುದನ್ನು ಗಮನಿಸಿದ್ದು, ಈ ರೀತಿಯ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಪೂರಕ ವಾತಾವರಣ ಇರುವುದಿಲ್ಲ. ಹೀಗಾಗಿ ಶೈಕ್ಷಣಿಕ ಗುಣಮಟ್ಟದ ದೃಷ್ಟಿಯಿಂದ ಒಂದೇ ಆವರಣದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಶಾಲೆಗಳು ನಡೆಯುತ್ತಿರುವ ಪ್ರಕರಣಗಳನ್ನು ಗುರುತಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಒಂದೇ ಶಾಲೆಯಾಗಿ ನಡೆಸಲು ಸೂಚನೆ ನೀಡಿದ್ದಾರೆ.