ಬೆಂಗಳೂರು : ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಗೆ ಫಲಿತಾಂಶದ ದಿನವೇ ‘ಡಿಜಿ ಲಾಕರ್’ ಮೂಲಕ ಡಿಜಿಟಲ್ ಅಂಕಪಟ್ಟಿ ನೀಡಿದ್ದ ಶಾಲಾ ಶಿಕ್ಷಣ ಇಲಾಖೆ, ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಇನ್ಮುಂದೆ ವಿದ್ಯಾರ್ಥಿಗಳಿಗೆ ಡಿಜಿಟಲ್ ವರ್ಗಾವಣೆ ಪ್ರಮಾಣಪತ್ರ (ಟಿಸಿ – Transfer Certificate) ನೀಡಲು ಇಲಾಖೆ ಮುಂದಾಗಿದೆ.
ಪ್ರಸಕ್ತ ಸಾಲಿನಲ್ಲಿ ಪ್ರಾಯೋಗಿಕವಾಗಿ (Pilot Basis), ದ್ವಿತೀಯ ಪಿಯುಸಿ ತೇರ್ಗಡೆಯಾದ ಸರ್ಕಾರಿ ಪಿಯು ಕಾಲೇಜುಗಳ ನಿಯಮಿತ ವಿದ್ಯಾರ್ಥಿಗಳಿಗೆ ಡಿಜಿಟಲ್ ಟಿಸಿ ನೀಡಲು ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯಕ್ಕೆ ಅನುಮತಿ ನೀಡಲಾಗಿದೆ.
ಏನಿದು ಹೊಸ ವ್ಯವಸ್ಥೆ?
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶದ ದತ್ತಾಂಶವನ್ನು ಬಳಸಿಕೊಂಡು ಸ್ವಯಂಚಾಲಿತವಾಗಿ (Automatically) ಡಿಜಿಟಲ್ ಟಿಸಿಯನ್ನು ಸೃಜಿಸಲಾಗುತ್ತದೆ. ವಿದ್ಯಾರ್ಥಿಗಳು ನೇರವಾಗಿ ತಮ್ಮ ಡಿಜಿಲಾಕರ್ ಖಾತೆಯ ಮೂಲಕ ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ವಿದ್ಯಾರ್ಥಿಗಳಿಗೆ ಸಿಗುವ ಅನುಕೂಲಗಳೇನು?
ಅಲೆಯುವುದು ತಪ್ಪುತ್ತದೆ: ಫಲಿತಾಂಶ ಪ್ರಕಟವಾದ ತಕ್ಷಣವೇ ಡಿಜಿಲಾಕರ್ನಲ್ಲಿ ಟಿಸಿ ಲಭ್ಯವಾಗುವುದರಿಂದ, ಪ್ರಾಂಶುಪಾಲರ ಭೌತಿಕ ಸಹಿಗಾಗಿ ವಿದ್ಯಾರ್ಥಿಗಳು ಕಾಲೇಜುಗಳಿಗೆ ಅಲೆಯುವುದು ತಪ್ಪುತ್ತದೆ.
ಉನ್ನತ ಶಿಕ್ಷಣಕ್ಕೆ ಮಾನ್ಯತೆ: ಉನ್ನತ ಶಿಕ್ಷಣದ ಪ್ರವೇಶಾತಿಗೆ ಈ ಡಿಜಿಟಲ್ ಟಿಸಿ ಸಂಪೂರ್ಣ ಮಾನ್ಯತೆ ಹೊಂದಿರಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಸರಳ ಪ್ರಕ್ರಿಯೆ: ಹೊಸ ಡಿಜಿಟಲ್ ಟಿಸಿ ವ್ಯವಸ್ಥೆಯನ್ನು ಸುಲಭಗೊಳಿಸಲು ಶುಲ್ಕ ಬಾಕಿ, ವಿದ್ಯಾರ್ಥಿ ವೇತನ ಹಾಗೂ ಹಾಜರಾತಿ ಲೆಕ್ಕಾಚಾರದಂತಹ ಅನಗತ್ಯ ಕಾಲಂಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.
ನಿಖರ ಜೋಡಣೆ: ವಿದ್ಯಾರ್ಥಿಯ ಶೈಕ್ಷಣಿಕ ದಾಖಲೆಗಳ ನಿಖರ ಜೋಡಣೆಗಾಗಿ ‘ಸ್ಯಾಟ್ಸ್’ (SATS) ಸಂಖ್ಯೆಯ ಜೊತೆಗೆ ‘ಪರೀಕ್ಷಾ ನೋಂದಣಿ ಸಂಖ್ಯೆ’ ಮತ್ತು ‘ಅಪಾರ್ ಐಡಿ’ (APAAR ID) ಯನ್ನು ಡಿಜಿಟಲ್ ಟಿಸಿ ಒಳಗೊಂಡಿರಲಿದೆ.
ಗಮನಿಸಿ: ಖಾಸಗಿ ಅಥವಾ ಪುನರಾವರ್ತಿತ (Repeater) ವಿದ್ಯಾರ್ಥಿಗಳು ಈ ಹಿಂದಿನಂತೆಯೇ ಪ್ರಾಂಶುಪಾಲರಿಗೆ ಅರ್ಜಿ ಸಲ್ಲಿಸಿ ಕಾಲೇಜು ಹಂತದಲ್ಲೇ ಟಿಸಿ ಪಡೆಯಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಈ ವ್ಯವಸ್ಥೆಯನ್ನು ವಿಸ್ತರಿಸುವ ಆಲೋಚನೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.








