ಬೆಂಗಳೂರು : ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ, ಜನಸಾಮಾನ್ಯರಿಗೆ ಮತ್ತು ಪ್ರಯಾಣಿಕರಿಗೆ ಬಜೆಟ್ ಮಾಹಿತಿಯನ್ನು ನೇರವಾಗಿ ತಲುಪಿಸಲು ‘ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ’ (DIPR) ಈ ವಿಶೇಷ ಕ್ರಮ ಕೈಗೊಂಡಿದೆ. ಸಿಎಂ ಸಿದ್ದರಾಮಯ್ಯ ಅವರು ಇಂದು 2026-27ನೇ ಸಾಲಿನ ಆಯವ್ಯಯ ಮಂಡಿಸಲಿದ್ದು, ಇದರ ನೇರ ಪ್ರಸಾರವನ್ನು ರಾಜ್ಯದ ಆಯ್ದ 230 ಬಸ್ ನಿಲ್ದಾಣಗಳ ಟಿವಿಗಳಲ್ಲಿ ಪ್ರದರ್ಶಿಸಲಾಗುತ್ತದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (ಡಿಐಪಿಆರ್)ಯು ಬೆಂಗಳೂರು ಮೂಲದ ವೃತ್ತಿ ಮೀಡಿಯಾ ಸಲ್ಯೂಷನ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ರಾಜ್ಯದಾದ್ಯಂತ ಆಯ್ದ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಅಳವಡಿಸಿರುವ ಡಿಜಿಟಲ್ ಡಿಸ್ಪ್ಲೇ (ಎಲ್‍ಇಡಿ) ಮತ್ತು ಟಿವಿ ಪರದೆಗಳ ಮೂಲಕ ಬಜೆಟ್ ಮಂಡನೆಯ ನೇರ ಪ್ರಸಾರವನ್ನು ಮಾ. 6ರಂದು ಬೆಳಿಗ್ಗೆ 10.15 ಗಂಟೆಯಿಂದ ಪ್ರಸಾರ ಮಾಡಲಿದೆ.
ಆರ್ಥಿಕ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17ನೇ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸುತ್ತಿದ್ದಾರೆ. ಈ ಮಹತ್ವದ ಬಜೆಟ್ ಮಂಡನೆಯ ನೇರ ಪ್ರಸಾರವನ್ನು ರಾಜ್ಯದ ಜನತೆಗೆ ತಲುಪಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ. ನಿಂಬಾಳ್ಕರ್, ಐಪಿಎಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








