ಕೋಲಾರ : ಸಾಧಿಸುವ ಛಲ ಒಂದಿದ್ದರೆ ಎಂತಹ ಕಠಿಣ ಸವಾಲುಗಳನ್ನು ಕೂಡ ಎದುರಿಸಬಹುದು ಎನ್ನುವ ಮಾತಿಗೆ ಇದೀಗ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆದ ಕೋಲಾರದ ವಿದ್ಯಾರ್ಥಿನಿ ಕುಸುಮ ಪಾತ್ರಳಾಗಿದ್ದಾಳೆ. ಹೌದು ತೀವ್ರ ಅನಾರೋಗ್ಯದ ನಡುವೆಯೂ ಆಂಬುಲೆನ್ಸ್ ನಲ್ಲಿ ಬಂದು ಸ್ಟ್ರೆಚರ್ ಮೇಲೆಯೇ ಪರೀಕ್ಷೆ ಬರೆದು ಕುಸುಮ ಫಸ್ಟ್ ಕ್ಲಾಸ್ನಲ್ಲಿ ತೇರ್ಗಡೆಯಾಗಿದ್ದಾಳೆ.
ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಚಿನ್ನನಾಗಹಳ್ಳಿ ನಿವಾಸಿಯಾಗಿರುವ ಕುಸುಮಾ, ಪರೀಕ್ಷೆಯ ಸಮಯದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಆದರೆ ಪರೀಕ್ಷೆ ತಪ್ಪಿಸಿಕೊಳ್ಳಬಾರದು ಎಂಬ ದೃಢ ಸಂಕಲ್ಪ ಮಾಡಿದ ಆಕೆ, ಆಂಬುಲೆನ್ಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಆಗಮಿಸುತ್ತಿದ್ದರು. ಎದ್ದುನಿಲ್ಲಲು ಸಾಧ್ಯವಾಗದ ಸ್ಥಿತಿಯಲ್ಲೂ ಸ್ಟ್ರೆಚರ್ ಮೇಲೆ ಮಲಗಿಕೊಂಡೇ ಪರೀಕ್ಷೆ ಬರೆದು ಎಲ್ಲರ ಗಮನ ಸೆಳೆದಿದ್ದರು. ಇಂದು ಹೊರಬಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಕುಸುಮಾ 625 ಅಂಕಗಳಿಗೆ 374 ಅಂಕಗಳನ್ನು ಗಳಿಸಿದ್ದಾರೆ.
ದೈಹಿಕ ಯಾತನೆಯ ನಡುವೆಯೂ ಆಕೆ ಗಳಿಸಿರುವ ಈ ಅಂಕಗಳು ಆಕೆಯ ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿವೆ. ಸದ್ಯ ಕುಸುಮಾ ಬೆಂಗಳೂರಿನ ವೈಟ್ ಫೀಲ್ಡ್‌ನ ಹಾಸ್ಟರ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ದೃಢ ಸಂಕಲ್ಪ ಮತ್ತು ಛಲದಿಂದ ಪರೀಕ್ಷೆ ಎದುರಿಸಿದ ಕುಸುಮಾ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರ ಈ ಅಸಾಧಾರಣ ಸಾಧನೆ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ವಿಶೇಷ ವಾಗಿ ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಕುಸುಮಾಳ ಬೆಂಬಲಕ್ಕೆ ನಿಂತು, ಆಕೆಗೆ ಬೇಕಾದ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶಿಕ್ಷಣ ಇಲಾಖೆ ಹಾಗೂ ಇತರರ ಸಹಕಾರವೂ ಇದಕ್ಕೆ ಕಾರಣ.








