ಚನ್ನೈ : ನಿನ್ನೆ ಚೆನ್ನೈನ ಪ್ರತಿಷ್ಠಿತ ನೆಹರು ಕ್ರೀಡಾಂಗಣದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳು ಮತ್ತು ಬೆಂಬಲಿಗರ ಸಮ್ಮುಖದಲ್ಲಿ ಈ ಐತಿಹಾಸಿಕ ಕ್ಷಣ ಸಂಭವಿಸಿತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಖ್ಯಾತ ನಟಿ ತ್ರಿಶಾ ಸೇರಿದಂತೆ ಹಲವು ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾದರು. ಎಂಜಿಆರ್, ಕರುಣಾನಿಧಿ ಮತ್ತು ಜಯಲಲಿತಾರಂತಹ ದಿಗ್ಗಜರು ಆಳಿದ ತಮಿಳುನಾಡಿನ ಸಿಂಹಾಸನವನ್ನು ಈಗ ದಳಪತಿ ವಿಜಯ್ ಅಲಂಕರಿಸಿದ್ದಾರೆ.
ಅತಿ ಕಿರಿಯ ಮಹಿಳಾ ಸಚಿವೆ ಕೀರ್ತನಾ
ಶಿವಕಾಶಿ ಕ್ಷೇತ್ರದ 29 ವರ್ಷದ ಟಿವಿಕೆ ಶಾಸಕಿ ಸೆಲ್ವಿ ಕೀರ್ತನಾ ಅವರು ಸಿಎಂ ವಿಜಯ್ ಸಂಪುಟದಲ್ಲಿ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕೇವಲ 29 ವರ್ಷ ವಯಸ್ಸಿನ ಕೀರ್ತನಾ ಅವರು ತಮಿಳುನಾಡಿನ ಅತ್ಯಂತ ಕಿರಿಯ ಸಚಿವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲ, ವಿಜಯ್ ಸಂಪುಟದಲ್ಲಿ ಅವರು ಮೊದಲ ಮತ್ತು ಏಕೈಕ ಮಹಿಳಾ ಸಚಿವೆಯಾಗಿದ್ದಾರೆ.
ಶಿವಕಾಶಿಯಲ್ಲಿ ಇತಿಹಾಸ ಸೃಷ್ಟಿಸಿದ ಕೀರ್ತನಾ
ಶಿವಕಾಶಿ ಕ್ಷೇತ್ರದಲ್ಲಿ ಸುಮಾರು ಏಳು ದಶಕಗಳಿಂದಲೂ ಪುರುಷ ಪ್ರಾಬಲ್ಯವಿತ್ತು. ಈ ಪ್ರಬಲ ಪುರುಷ ಪ್ರಾಬಲ್ಯವನ್ನು ಮುರಿದು, ಆ ಕ್ಷೇತ್ರದಲ್ಲಿ ಮೊದಲ ಬಾರಿಗೆ ಟಿವಿಕೆ ಪಕ್ಷದಿಂದ ಗೆಲುವು ಸಾಧಿಸಿದ ಕೀರ್ತನಾ, ಮೊದಲ ಮಹಿಳಾ ಶಾಸಕಿಯಾಗಿಯೂ ದಾಖಲೆ ಬರೆದಿದ್ದಾರೆ. ಈಗ ಅವರು ಸಚಿವೆಯಾಗಿ ಪದಗ್ರಹಣ ಮಾಡುವ ಮೂಲಕ ಮತ್ತೊಂದು ಇತಿಹಾಸ ನಿರ್ಮಿಸಿದ್ದಾರೆ.
ಸ್ನಾತಕೋತ್ತರ ವಿದ್ಯಾವಂತೆ, ರಾಜಕೀಯ ಸಲಹೆಗಾರ್ತಿ
ಸ್ನಾತಕೋತ್ತರ ಪದವೀಧರೆಯಾಗಿರುವ ಕೀರ್ತನಾ ಅವರು ಈ ಹಿಂದೆ ತಮಿಳುನಾಡು ಮಾಜಿ ಸಿಎಂ ಎಂ.ಕೆ.ಸ್ಟಾಲಿನ್ ಸೇರಿದಂತೆ ಹಲವು ಪ್ರಮುಖ ನಾಯಕರಿಗೆ ರಾಜಕೀಯ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ.
ವಿಜಯ್ ಸಂಪುಟದ ಸಚಿವರ ಪಟ್ಟಿ
ಮುಖ್ಯಮಂತ್ರಿ ವಿಜಯ್ ಅವರೊಂದಿಗೆ ಒಂಬತ್ತು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರೆಂದರೆ,
ಎಸ್. ಕೀರ್ತನಾ
ಕೆ.ಎ. ಸೆಂಗೊಟ್ಟೈಯನ್
ಆಧವ್ ಅರ್ಜುನ್
ಬಸ್ಸಿ ಆನಂದ್
ಡಾ. ಅರುಣ್ ರಾಜ್
ವೆಂಕಟರಮಣನ್
ನಿರ್ಮಲ್ ಕುಮಾರ್
ರಾಜ್ ಮೋಹನ್
ಡಾ. ಟಿ.ಕೆ. ಪ್ರಭು








