ಬೆಂಗಳೂರು : ಕನ್ನಡ ನಾಮಫಲಕ ಅಳವಡಿಕೆ ಹೋರಾಟದಲ್ಲಿ ಬಂಧನಕ್ಕೊಳಗಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ನಾರಾಯಣಗೌಡ ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆಗೊಂಡರು. ನಾರಾಯಣಗೌಡ ಬಿಡುಗಡೆಯಾಗುತ್ತಿದ್ದಂತೆ ಕುಮಾರಸ್ವಾಮಿ ಲೇಔಟ್ ನ ಪೊಲೀಸರೂ ವಶಕ್ಕೆ ಪಡೆದುಕೊಂಡಿದ್ದಾರೆ.
ನಂತರ ನಾರಾಯಣಗೌಡರನ್ನು ಮಾರ್ಥಾಸ್ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆ ಎಂದು ಕರೆದುಕೊಂಡು ಹೋಗಲಾಗಿದ್ದು, ಇದೀಗ ಕುಮಾರಸ್ವಾಮಿ ಲೇಔಟ್ ಪೊಲೀಸ್ ಅಧಿಕಾರಿಗಳು ಅಲ್ಲಿಂದ ನೇರವಾಗಿ ಕೋರ್ಟಿಗೆ ಕರೆ ತಂದು ಹಾಜರುಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಇದೆ ವೇಳೆ ಕೋರ್ಟ್ ನಾರಾಯಣಗೌಡರ ಜಾಮೀನು ಅರ್ಜಿ ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆಗೆ ಕೋರ್ಟ್ ಮುಂದೂಡಿತು. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ಕೆಸ್ ವಾರೆಂಟ್ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಕರವೇ ಅಧ್ಯಕ್ಷ ನಾರಾಯಣಗೌಡರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ನಾಮಫಲಕ ರ್ಯಾಲಿ ನಡೆಸಿತ್ತು. ಅಂಗಡಿ ಮುಂಗಟ್ಟುಗಳು ನಾಮಫಲಕಗಳು ಶೇ 60ರಷ್ಟು ಕನ್ನಡದಲ್ಲಿ ಇರಬೇಕೆಂದು ಆಗ್ರಹಿಸಿತ್ತು. ಅಲ್ಲದೇ ರ್ಯಾಲಿ ವೇಳೆ ಬೇರೆ ಬೇರೆ ಭಾಷೆಗಳಲ್ಲಿದ್ದ ಅಂಗಡಿಗಳ ಬೋರ್ಡ್ಗಳನ್ನು ಕಿತ್ತೆಸೆಯಲಾಗಿತ್ತು. ಈ ಸಂಬಂಧ ಪೊಲೀಸರು ನಾರಾಯಣಗೌಡ ಸೇರಿದಂತೆ ಹಲವು ಕರವೇ ಕಾರ್ಯಕರ್ತರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಇಂದು ಬೆಳಿಗ್ಗೆ ಪರಪ್ಪನ ಅಗ್ರಹಾರದ ಜೈಲಿನಿಂದ ಕರವೇ ಅಧ್ಯಕ್ಷ ನಾರಾಯಣಗೌಡ ಬಿಡುಗಡೆಯಾಗಿದ್ದಾರೆ. ನಾರಾಯಣಗೌಡ ರಿಲೀಸ್ ಆಗುತ್ತಿದ್ದಂತೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಇದೀಗ ಕೋರ್ಟ್ ಮುಂದೆ ನಾರಾಯಣಗೌಡರನ್ನು ಹಾಜರುಪಡಿಸಿದ್ದಾರೆ.