ಧಾರವಾಡ : ಸಾರಿಗೆ ಬಸ್ ನೌಕರನ ಪ್ರಕರಣ ಒಂದರಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಒಂದನ್ನು ನೀಡಿದ್ದು, ನೌಕರನ ಮೇಲೆ ಗಂಭೀರ ಆರೋಪಗಳಿದ್ದರೂ ಸೂಕ್ತ ಇಲಾಖಾ ವಿಚಾರಣೆ ನಡೆಸದೆ ಮತ್ತು ಆತನ ವಾದ ಆಲಿಸದೆ ಸೇವೆಯಿಂದ ವಜಾ ಮಾಡುವುದು ಕಾನೂನು ಬಾಹಿರ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (NWKSRTC) ತನ್ನ ಭದ್ರತಾ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಧಾರವಾಢ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ನೀಡಿದೆ.
ಬೆಳಗಾವಿಯ ಗೋಕಾಕ್ ತಾಲೂಕಿನ ಸಂಜುಕುಮಾರ್ ಎಂಬುವರು ನಿಗಮದ ನೌಕರರಾಗಿದ್ದ ತಂದೆಯ ನಿಧನದ ನಂತರ ಅನುಕಂಪದ ಆಧಾರದಲ್ಲಿ ಭದ್ರತಾ ಸಿಬ್ಬಂದಿಯಾಗಿ ನೇಮಕಗೊಂಡಿದ್ದರು. ಕೆಲಸಕ್ಕೆ ಸೇರುವಾಗ ನಕಲಿ ಶೈಕ್ಷಣಿಕ ದಾಖಲೆಗಳನ್ನು ನೀಡಿದ್ದಾರೆ ಎಂಬ ಆರೋಪದಲ್ಲಿ ಅವರನ್ನು 2024ರ ಡಿ.13ರಂದು ಸೇವೆಯಿಂದ ವಜಾಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ
ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಪೀಠ, ನೌಕರನ ಮೇಲೆ ನಕಲಿ ದಾಖಲೆ ನೀಡಿದ ಆರೋಪವಿದ್ದಾಗ, ಅದು ಆತನ ವ್ಯಕ್ತಿತ್ವಕ್ಕೆ ಕಳಂಕ ತರುವಂತಹದ್ದಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಇಲಾಖಾ ವಿಚಾರಣೆ ನಡೆಸುವುದು ಮತ್ತು ನೌಕರನಿಗೆ ತನ್ನ ವಾದ ಮಂಡಿಸಲು ಅವಕಾಶ ನೀಡುವುದು ಕಡ್ಡಾಯ ಎಂದು ಹೇಳಿದೆ.
ನೌಕರನು ಪ್ರೊಬೇಷನರಿ ಅವಧಿಯಲ್ಲಿದ್ದರೂ, ಆತನ ವಜಾ ಆದೇಶವು ಶಿಕ್ಷಾರ್ಹ ರೂಪದಲ್ಲಿದ್ದರೆ, ಅದಕ್ಕೂ ಮುನ್ನ ವಿಚಾರಣೆ ನಡೆಸಲೇಬೇಕು ಎಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಹೈಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಅರ್ಜಿದಾರರ ವಜಾ ಆದೇಶವನ್ನು ರದ್ದುಪಡಿಸಿರುವ ನ್ಯಾಯಾಲಯ, ತಕ್ಷಣವೇ ಕೆಲಸಕ್ಕೆ ನೇಮಿಸಿಕೊಳ್ಳುವಂತೆ ನಿಗಮಕ್ಕೆ ನಿರ್ದೇಶನ ನೀಡಿದೆ. ಅಲ್ಲದೇ ಇಲಾಖಾ ವಿಚಾರಣೆ ನಡೆಸಿ ಪ್ರಕರಣವನ್ನು ಕಾನೂನುಬದ್ಧವಾಗಿ ನಿರ್ಧರಿಸುವ ಸ್ವಾತಂತ್ರ್ಯ ನಿಗಮಕ್ಕಿದೆ ಎಂದು ಸ್ಪಷ್ಟಪಡಿಸಲಾಗಿದೆ.








