ಬೆಂಗಳೂರು : ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಅಲ್ಲದೇ ಕಬ್ಬು ಬೆಳಗಾರರಿಗೆ ದ್ರೋಹ ಬಗೆದಿರುವುದೂ ಕೇಂದ್ರ ಸರ್ಕಾರ. ಈ ಬಗ್ಗೆ ಬಿಜೆಪಿ, ಜೆಡಿಎಸ್ ಸಂಸದರು ಬಾಯಿ ಬಿಡುತ್ತಿಲ್ಲ. ರಾಜ್ಯದಲ್ಲಿ 2028ರಲ್ಲೂ ಕಾಂಗ್ರೆಸ್ಸೇ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬರೆದಿರುವ “ನೀರಿನ ಹೆಜ್ಜೆ : ವಿವಾದ-ಒಪ್ಪಂದ-ತೀರ್ಪು” ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಮಹದಾಯಿ, ಕೃಷ್ಣ ಮತ್ತು ಕಾವೇರಿ ಸೇರಿ ಅಂತಾರಾಜ್ಯ ಜಲ ವಿವಾದಗಳು ಇನ್ನೂ ಜೀವಂತವಾಗಿದ್ದು, ರಾಜ್ಯಕ್ಕೆ ಪೂರ್ತಿ ಅನುಕೂಲಕರವಾದ ನ್ಯಾಯಬದ್ಧ ತೀರ್ಮಾನಗಳು ಇನ್ನೂ ಆಗಬೇಕಿದೆ. ಮೇಕೆದಾಟಿನಲ್ಲಿ 67 ಟಿಎಂಸಿ ನೀರನ್ನು ಶೇಖರಣೆ ಮಾಡಲಾಗುತ್ತದೆ. ಈ ಯೋಜನೆಯಲ್ಲಿ ನಮಗಿಂತ ಹೆಚ್ಚು ತಮಿಳುನಾಡಿಗೇ ಅನುಕೂಲ. ಆದರೂ ಅವರು ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ತಮಿಳುನಾಡು ಸರ್ಕಾರ ಕೇವಲ ರಾಜಕೀಯ ಕಾರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ.
ಮತ್ತೊಂದು ಕಡೆ ಕೃಷ್ಣ ನದಿ ನೀರಿನ ವಿವಾದದಲ್ಲೂ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಮಾಡಿಲ್ಲ. ಜೆಡಿಎಸ್ ಪಕ್ಷವಾಗಲೀ, ಬಿಜೆಪಿ ಪಕ್ಷವಾಗಲೀ ಈ ಪಕ್ಷಗಳ ಸಂಸದರಾಗಲೀ ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆಯಾಗಲೀ, ಆರ್ಥಿಕವಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಗೆಯುತ್ತಿರುವ ದ್ರೋಹದ ಬಗ್ಗೆಯೂ ಮಾತಾಡುವುದಿಲ್ಲ ಎಂದು ಟೀಕಿಸಿದರು.








