ದಕ್ಷಿಣಕನ್ನಡ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಹಣ ತಿಂಗಳು ತಿಂಗಳು ಸರಿಯಾಗಿ ಪಾವತಿಯಾಗುತ್ತಿಲ್ಲ ಎಂಬ ಜನರ ಆರೋಪದ ನಡುವೆ, ಶಾಕಿಂಗ್ ವಿಚಾರವೊಂದು ಬಹಿರಂಗಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದಾಗಲೇ ಮೃತಪಟ್ಟಿರುವ ಫಲಾನುಭವಿಗಳ ಖಾತೆಗಳಿಗೆ ಸುಮಾರು 22 ಕೋಟಿ ರೂಪಾಯಿ ಹಣ ಜಮೆಯಾಗಿರುವುದು ಬೆಳಕಿಗೆ ಬಂದಿದೆ. ವಿಷಯ ಗೊತ್ತಾಗುತ್ತಲೇ ಈ ಬಗ್ಗೆ ತಕ್ಷಣ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಹೌದು ಮೃತ ಗೃಹಲಕ್ಷ್ಮಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಇನ್ನೂ ಹಣ ಜಮೆಯಾಗುತ್ತಿದ್ದು, ಮೃತಪಟ್ಟ ಫಲಾನುಭವಿಗಳ ಖಾತೆಗೆ ಜಮೆಯಾಗಿರುವ ಹಣವನ್ನು ಮರಳಿ ಪಡೆಯಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಮರಣ ಹೊಂದಿದ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ರೂ.22 ಕೋಟಿ ಅನುದಾನ ವರ್ಗಾವಣೆ ಆಗಿದೆ ಎಂಬ ಮಾಹಿತಿಯನ್ನು ರಾಜ್ಯ ಕಚೇರಿಯಿಂದ ತಿಳಿಸಿರುವ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿ, ಫಲಾನುಭವಿಗಳ ಖಾತೆಗೆ ಜಮೆಯಾಗಿರುವ ಸಹಾಯಧನ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡುವ ಬಗ್ಗೆ ಫಲಾನುಭವಿಗಳ ಮಾಹಿತಿಯನ್ನು ಪಡೆಯಲು ಕ್ರಮವಹಿಸಬೇಕು ಎಂದು ಅವರು ಹೇಳಿದ್ದಾರೆ.
ಮರಣ ಹೊಂದಿದ ಫಲಾನುಭವಿಯ ಹೆಸರು, ಖಾತೆ ಸಂಖ್ಯೆ ಹಾಗೂ ಬ್ಯಾಂಕಿನ ವಿವರಗಳು ಇದ್ದಲ್ಲಿ ಬ್ಯಾಂಕ್ ಮುಖಾಂತರ ಕ್ರಮಕೈಗೊಳ್ಳಬಹುದು. ಇಲ್ಲವಾದಲ್ಲಿ ಗ್ರಾಮದಲ್ಲಿ ಮರಣಹೊಂದಿದವರ ಮಾಹಿತಿ ಗ್ರಾಮ ಕರಣಿಕರ ಕಚೇರಿಯಲ್ಲಿ ಲಭ್ಯವಿರುತ್ತದೆ. ಅಂತಹ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪಡೆದಲ್ಲಿ ಮರಣ ಹೊಂದಿದ ಫಲಾನುಭವಿಯ ಖಾತೆಗೆ ಸಹಾಯಧನ ಬಿಡುಗಡೆ ಮಾಡುವುದನ್ನು ತಡೆಹಿಡಿಯಬಹುದು. ಮೃತ ಫಲಾನುಭವಿಯ ಮರಣ ಪ್ರಮಾಣಪತ್ರ ಬಂದ ತಕ್ಷಣ ಫಲಾನುಭವಿಗಳ ಪಟ್ಟಿಯಿಂದ ಹೆಸರನ್ನು ತೆಗೆಯಬೇಕು. ಅವರ ಹೆಸರು, ಬ್ಯಾಂಕ್ ವಿವರಗಳಿದ್ದಲ್ಲಿ ಬ್ಯಾಂಕ್ ಮುಖಾಂತರ ಖಾತೆಯನ್ನು ಸ್ಥಗಿತಗೊಳಿಸಲು ಕ್ರಮವಹಿಸಬೇಕು ಎಂದು ಅವರು ಸೂಚಿಸಿದ್ದಾರೆ.








