ಬೆಳಗಾವಿ : ಇತ್ತೀಚಿಗೆ ದೇಶ ಹಾಗೂ ರಾಜ್ಯದಲ್ಲಿ ಡಿಜಿಟಲ್ ವಂಚನೆ ಹಾಗೂ ಡಿಜಿಟಲ್ ಅರೆಸ್ಟ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಈಗಾಗಲೇ ಈ ಕುರಿತು ಸಾರ್ವಜನಿಕರಿಗೆ ವಾಟ್ಸಾಪ್, ಫೇಸ್ ಬುಕ್ ಹಾಗೂ ಇತರೆ ಸಾಮಾಜಿಕ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.
ಇಂದು ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ಡಿಜಿಟಲ್ ಫ್ರಾಡ್ ಬಗ್ಗೆ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರ ನೀಡಿದ ಅವರು, ರಾಜ್ಯದಲ್ಲಿ ಪ್ರಸ್ತುತ ವರ್ಷದಲ್ಲಿ ಡಿಜಿಟಲ್ ಅರೆಸ್ಟ್ ಸಂಬಂಧಿತ ಒಟ್ಟು 641 ಪ್ರಕರಣಗಳಲ್ಲಿ 109 ಕೋಟಿ ರೂ.ಗೂ ಹೆಚ್ಚು ಮೊತ್ತದ ವಂಚನೆ ಆಗಿದೆ. ಅದರಲ್ಲಿ 9.45 ಕೋಟಿ ರೂ.ಗಳನ್ನು ವಶಪಡಿಸಿಕೊಂಡು 27 ಜನರನ್ನು ಅರೆಸ್ಟ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟೆಲಿಗ್ರಾಂ ಇತರೆ ಅಂತರ್ಜಾಲ ವೇದಿಕೆಗಳಲ್ಲಿ ಸಕ್ರಿಯವಾಗಿರುವ ಖಾತೆಗಳು ಹಾಗೂ ಗುಂಪುಗಳನ್ನು ಪತ್ತೆ ಹಚ್ಚಿ, 268 ಫೇಸ್ಬುಕ್ ಗುಂಪುಗಳು, 465 ಟೆಲಿಗ್ರಾಂ ಗುಂಪುಗಳು, 15 ಇನ್ಸ್ಟಾಗ್ರಾಂ ಖಾತೆಗಳು ಹಾಗೂ 61 ವಾಟ್ಸಾಪ್ ಗುಂಪುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಶಾಲಾ ಕಾಲೇಜುಗಳಿಗೆ ಇತರೆ ಸಂಸ್ಥೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಡಿಜಿಟಲ್ ಅರೆಸ್ಟ್ ವಂಚನೆಯ ಬಗ್ಗೆ ಜಾಗೃತಿ ಮೂಡಿಸಲು ಜಾಗೃತಾ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕಳೆದ ವರ್ಷ ಇಡೀ ದೇಶದಲ್ಲಿ 42,000 ಪ್ರಕರಣ ದಾಖಲಾಗಿದ್ದು, ರಾಜ್ಯದಲ್ಲಿ 11,000 ಪ್ರಕರಣ ದಾಖಲಾಗಿದೆ. ಇದೀಗ ದೇಶದಾದ್ಯಂತ ಹಾಗೂ ರಾಜ್ಯದಲ್ಲೂ ಕೂಡ ಡಿಜಿಟಲ್ ಅರೆಸ್ಟ್ ಪ್ರಕರಣಗಳು ದಿನೇ ದಿನೇ ಅಧಿಕವಾಗುತ್ತಿದ್ದು, ಸಾರ್ವಜನಿಕರು ಸೈಬರ್ ವಂಚನೆ ಆದ ಕೂಡಲೇ ಉಚಿತ ಸಹಾಯವಾಣಿ ಸಂಖ್ಯೆ 1930ಗೆ ಮಾಹಿತಿ ನೀಡುವಂತೆ ತಿಳಿಸಿದರು.