ಬೆಂಗಳೂರು: ರೈತರಿಂದ ಅತ್ಯಲ್ಪ ಬೆಲೆಗೆ ಭೂಮಿ ಪಡೆದು, ಅಸ್ತಿತ್ವದಲ್ಲೇ ಇಲ್ಲದ ಖಾಸಗಿ ಕಂಪನಿಗೆ ಹಸ್ತಾಂತರಿಸಿದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಅಧಿಕಾರಿಗಳ ಭಾರಿ ವಂಚನೆಯ ಜಾಲದ ಗಂಭೀರತೆಯನ್ನು ಪರಿಗಣಿಸಿರುವ ಹೈಕೋರ್ಟ್, ಅಧಿಕಾರಿಗಳು ಮತ್ತು ಕಂಪನಿಯ ವಿರುದ್ಧ ಸಿಬಿಐ (CBI) ತನಿಖೆಗೆ ಮಹತ್ವದ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ:
ಬೆಂಗಳೂರಿನ ಹೆಬ್ಬಾಳ ಮತ್ತು ಅಮಾನಿಕೆರೆ ಹೆಬ್ಬಾಳ ಗ್ರಾಮಗಳಲ್ಲಿ ಸುಮಾರು 55 ಎಕರೆ ಭೂಮಿಯನ್ನು KIADB ಸ್ವಾಧೀನಪಡಿಸಿಕೊಂಡಿತ್ತು. ಈ ಭೂಮಿಯನ್ನು ‘ಲೇಕ್ ವ್ಯೂವ್ ಟೂರಿಸಂ ಕಾರ್ಪೊರೇಶನ್’ ಎಂಬ ಸಂಸ್ಥೆಗೆ ನೀಡಲಾಗಿತ್ತು. ಆದರೆ, ಈ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂದು ಭೂಮಾಲೀಕ ಕೃಷ್ಣಾರೆಡ್ಡಿ ಮತ್ತು ಸಂಬಂಧಿಕರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ನ್ಯಾಯಮೂರ್ತಿ ಡಿ.ಕೆ.ಸಿಂಗ್ ಮತ್ತು ನ್ಯಾಯಮೂರ್ತಿ ತಾರಾ ವಿತಸ್ಥ ಗಂಜಿ ಅವರಿದ್ದ ವಿಭಾಗೀಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿ ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿದೆ:
ಕ್ರಿಮಿನಲ್ ಸಂಚು: ಅಸ್ತಿತ್ವದಲ್ಲೇ ಇಲ್ಲದ ಕಂಪನಿಗೆ ಭೂಮಿ ನೀಡಿರುವುದು ಸರ್ಕಾರಿ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳ ನಡುವೆ ನಡೆದ ದೊಡ್ಡ ಮಟ್ಟದ ಕ್ರಿಮಿನಲ್ ಸಂಚು.
ಅಸ್ತಿತ್ವವಿಲ್ಲದ ಸಂಸ್ಥೆ: 2011ರಲ್ಲಿ ಸ್ಥಾಪನೆಯಾಗಿದ್ದರೂ, 2022-23ರ ವರದಿಯ ಪ್ರಕಾರ ಈ ಕಂಪನಿಯು ಯಾವುದೇ ವ್ಯಾಪಾರ ಅಥವಾ ಕಾರ್ಯಾಚರಣೆಯನ್ನು ಆರಂಭಿಸಿರಲಿಲ್ಲ. ಇಂತಹ ‘ಪ್ರಸ್ತಾವಿತ’ ಕಂಪನಿಗೆ ಭೂಮಿ ನೀಡಿರುವುದು ಕಾನೂನುಬಾಹಿರ.
ರೈತರಿಗೆ ಅನ್ಯಾಯ: ಅಮೂಲ್ಯವಾದ ಆಸ್ತಿಯನ್ನು ಅತ್ಯಲ್ಪ ಪರಿಹಾರ ನೀಡಿ ರೈತರಿಂದ ಕಿತ್ತುಕೊಳ್ಳಲಾಗಿದೆ.
ನ್ಯಾಯಾಲಯದ ಕಡತದ ಆದೇಶ:
ಭೂಸ್ವಾಧೀನ ರದ್ದು: 55 ಎಕರೆ ಜಮೀನಿಗೆ ಸಂಬಂಧಿಸಿದ ಸಂಪೂರ್ಣ ಭೂಸ್ವಾಧೀನ ಪ್ರಕ್ರಿಯೆಯನ್ನು ನ್ಯಾಯಾಲಯ ರದ್ದುಗೊಳಿಸಿದೆ.
ದಂಡ: ಲೇಕ್ ವ್ಯೂವ್ ಟೂರಿಸಂ ಕಾರ್ಪೊರೇಶನ್ ಸಂಸ್ಥೆಗೆ 10 ಲಕ್ಷ ರೂ. ದಂಡ ವಿಧಿಸಲಾಗಿದೆ.
CBI ತನಿಖೆ: ಈ ಹಗರಣದಲ್ಲಿ ಸ್ವತಃ ಸರ್ಕಾರಿ ಪ್ರಾಧಿಕಾರವೇ ಭಾಗಿಯಾಗಿರುವುದರಿಂದ, ರಾಜ್ಯ ತನಿಖಾ ಸಂಸ್ಥೆಗಳಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಹೀಗಾಗಿ ಸಿಬಿಐ ತನಿಖೆ ನಡೆಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.






