ಬೆಂಗಳೂರು : ಇತ್ತೀಚಿಗೆ ಇಂಧನ ಇಲಾಖೆಯಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ ಮಾಡ್ತಿದ್ದಾರೆ ಎಂದು ಸಚಿವ ಕೆಜೆ ಜಾರ್ಜ್ ರಾಜೀನಾಮೆಗೆ ಮುಂದಾಗಿದ್ದರು ಎನ್ನುವ ಸುದ್ದಿ ಹರಿದಾಡಿತ್ತು. ಇದೀಗ ಸರ್ಕಾರಿ ನೌಕರರ ವರ್ಗಾವಣೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯರೆ ಹಸ್ತಕ್ಷೇಪ ಮಾಡುತ್ತಿರುವ ವಿಚಾರಕ್ಕೆ ಹೈಕೋರ್ಟ್ ಅಸಮಾಧಾನ ಹೊರಹಾಕಿದೆ.
ಹೌದು ಸಿಎಂ ಕಚೇರಿಯಿಂದ ವರ್ಗಾವಣೆ ವಿಚಾರವಾಗಿ ಬೆಸ್ಕಾಂ ಎಇ ಚೇತನ್ ಎಸ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡಸಿದ ಹೈಕೋರ್ಟ್ ಗ್ರೂಪ್ ಬಿ ಅಥವಾ ಸಿ ಉದ್ಯೋಗಿಗಳ ವರ್ಗಾವಣೆ ವಿಚಾರದಲ್ಲಿ ಅಸಮಾಧಾನ ಹೊರಹಾಕಿದೆ. ಮುಖ್ಯಮಂತ್ರಿಗಳಿಗೆ ನೌಕರರ ವರ್ಗಾವಣೆಗಿಂತ ಮಾಡಬೇಕಾದ ಉತ್ತಮ ಕೆಲಸಗಳಿದ್ದು, ಸರ್ಕಾರಿ ನೌಕರರ ವರ್ಗಾವಣೆ ವಿಚಾರ ಆಯಾ ಇಲಾಖೆಗೆ ಬಿಡಬೇಕು ಎಂದು ನ್ಯಾ.ಡಿ.ಕೆ.ಸಿಂಗ್, ನ್ಯಾ.ಟಿ.ಎಂ.ನದಾಫ್ ಅವರಿದ್ದ ಹೈಕೋರ್ಟ್ ದ್ವಿಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ.
ಸಿಎಂ ನೀಡುವ ವರ್ಗಾವಣೆ ಪತ್ರಗಳ ಬಗ್ಗೆ ಹೈಕೋರ್ಟ್ ಪೀಠವು ಸಿಎಸ್ ನಿಲುವು ಕೇಳಿತ್ತು. ಸಿಎಂ ಕಚೇರಿಯಿಂದ ನೀಡುವ ಟಿಪ್ಪಣಿಗಳು ಕೇವಲ ಶಿಫಾರಸುಗಳಷ್ಟೇ, ಸಂಬಂಧಪಟ್ಟ ಇಲಾಖೆ ವರ್ಗಾವಣೆ ಆದೇಶ ನೀಡುತ್ತದೆಂದು ಮುಖ್ಯ ಕಾರ್ಯದರ್ಶಿ ಉತ್ತರಿಸಿದ್ದರು. ಮುಖ್ಯಮಂತ್ರಿಗಳ ಕಚೇರಿ ವರ್ಗಾವಣೆಯ ಮನವಿ ಸ್ವೀಕರಿಸಬಾರದು, ಇಂತಹ ವಿಚಾರಗಳಿಗೆ ಮುಖ್ಯಮಂತ್ರಿ ತಮ್ಮ ಸಮಯ ವಿನಿಯೋಗಿಸಬಾರದು ಈ ಆದೇಶದ ಪ್ರತಿಯನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲು ಸೂಚನೆ ನೀಡಲಾಗಿದೆ ಅಂತ ಹೈಕೋರ್ಟ್ ಹೇಳಿದೆ.








