ಹುಬ್ಬಳ್ಳಿ: ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಫ್ರಿಡ್ಜ್, ವಾಷಿಂಗ್ ಮಷಿನ್, ಹೊಲಿಗೆ ಯಂತ್ರ, ಬೀದಿಬದಿ ವ್ಯಾಪಾರ, ಆಸ್ಪತ್ರೆ ಖರ್ಚು, ಬಂಗಾರ ಹೀಗೆ ನಾನಾ ಕಾರ್ಯಗಳಿಗೆ ಬಳಕೆ ಮಾಡಿಕೊಂಡಿದ್ದನ್ನು ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಗೃಹಿಣಿ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ 29 ಕಂತುಗಳ ಹಣದಿಂದ ಹೊಲದಲ್ಲಿ ಬೋರ್ವೆಲ್ ಕೊರೆಸಿ ಬದುಕು ಹಸನಾಗಿಸಿಕೊಂಡಿದ್ದಾರೆ.
ಕಲಘಟಗಿ ತಾಲೂಕಿನ ಸೂರಶೆಟ್ಟಿಕೊಪ್ಪ ಗ್ರಾಮದ ರೈತ ಮಹಿಳೆ ಈರವ್ವ ಅಂಗಡಿ ಗೃಹಲಕ್ಷ್ಮಿ ಯೋಜನೆ ಹಣವನ್ನು ಸದ್ಬಳಕೆ ಮಾಡಿಕೊಂಡು ಮಾದರಿಯಾಗಿದ್ದಾರೆ. ಏ.28ರಂದು ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ 2.5 ಎಕರೆ ಹೊಲದಲ್ಲಿ ಬೋರ್ ವೆಲ್ ಕೊರೆಸಿದ್ದು, ಇದರ ಫಲವಾಗಿ 5 ಇಂಚು ನೀರು ದೊರೆತಿದೆ. ಇದು ಈರವ್ವ ಕುಟುಂಬದ ಸಂತಸಕ್ಕೆ ಕಾರಣವಾಗಿದೆ.
ಗೃಹಲಕ್ಷ್ಮಿಯಿಂದ ಬಂದ ಹಣದಲ್ಲಿ ₹4000 ಉಳಿದಿದ್ದು ಮೋಟಾರ್ ಅಳವಡಿಸಲು ₹ 80,000 ವೆಚ್ಚ ತಗುಲಿದ್ದು ವಿವಿಧೆಡೆ ಸಾಲ ಮಾಡಿದ್ದಾರೆ. ನೀರಾವರಿ ಮಾಡಿ ಉತ್ತಮ ಬೆಳೆ ಬೆಳೆದು ಈ ಸಾಲ ತೀರಿಸುತ್ತೇವೆ ಎನ್ನುತ್ತಾರೆ ಈರವ್ವ ಹಾಗೂ ಆಕೆಯ ಪತಿ ಭರಮಣ್ಣ.
ಗೃಹಲಕ್ಷ್ಮಿ ಹಣದಲ್ಲಿ ಯಾವುದೇ ದುಂದು ವೆಚ್ಚ ಮಾಡದೇ ಹಣ ಉಳಿಸಿಕೊಂಡು ಜಮೀನಿನಲ್ಲಿ ಬೋರ್‌ವೆಲ್ ಕೊರೆಯಿಸಿರುವುದು ಇತರರಿಗೆ ಮಾದರಿಯಾಗಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಕಷ್ಟು ಅಪ ಸ್ವರಗಳ ಮಧ್ಯೆಯೇ ಬೋರ್‌ವೆಲ್ ಕೊರೆಯಿಸಿ ಹಣ ಸದುಪಯೋಗಪಡಿಸಿಕೊಂಡಿರುವುದು ಇತರಿಗೆ ಸ್ಫೂರ್ತಿ ದೊರೆತಿದೆ.








