ಬೆಂಗಳೂರು: 2025-26ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಲು ಹಾಗೂ ಹೊಸ ಸದಸ್ಯರನ್ನು ನೋಂದಾಯಿಸಲು ಅವಕಾಶ ನೀಡಿ, ರಾಜ್ಯ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಸಹಕಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ 2024-25ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಸಹಕಾರ ಇಲಾಖೆಯಿಂದ ಜಾರಿಗೊಳಿಸಲು ಹಾಗೂ ಸದಸ್ಯರನ್ನು ನೋಂದಾಯಿಸಲು ಮಾರ್ಗಸೂಚಿಗಳೊಂದಿಗೆ ಆದೇಶ ಹೊರಡಿಸಲಾಗಿತ್ತು ಎಂದಿದ್ದಾರೆ.
ಮುಖ್ಯಕಾರ್ಯನಿರ್ವಹಣಾಧಿಕಾರಿ (ಪ), ಯಶಸ್ವಿನಿ ಟ್ರಸ್ಟ್ ಇವರ ಪತ್ರದಲ್ಲಿ ಯಶಸ್ವಿನಿ ಯೋಜನೆಯು ಸಹಕಾರ ಸಂಘಗಳ ಸದಸ್ಯರ ಅನುಕೂಲಕ್ಕಾಗಿ ಸರ್ಕಾರವು ಜಾರಿಗೊಳಿಸಿರುವ ಒಂದು ಪ್ರತಿಷ್ಠಿತ (Flagship) ವಿಶಿಷ್ಟ್ಯ ಯೋಜನೆಯಾಗಿದ್ದು, ಇದರಲ್ಲಿ ಯಶಸ್ವಿನಿ ಫೋಟೋಕಾಲ್‌ನಂತೆ ನಿಗದಿಪಡಿಸಿರುವ ಚಿಕಿತ್ಸೆಗಳ ಪ್ಯಾಕೇಜಿನ ದರದ ಮಿತಿಗೊಳಪಟ್ಟು, ಫಲಾನುಭವಿ ಮತ್ತು ಅವರ ಕುಟುಂಬಕ್ಕೆ ವಾರ್ಷಿಕ ಗರಿಷ್ಟ ರೂ.5.00 ಲಕ್ಷ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮಿತಿಯೊಂದಿಗೆ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಇರುತ್ತದೆ ಎಂದು ಹೇಳಿದ್ದಾರೆ.
ಯಶಸ್ವಿನಿ ಯೋಜನೆಯು ವಿಮಾ ಯೋಜನೆಯಾಗಿರುವುದಿಲ್ಲ. ಬದಲಾಗಿ ಇದೊಂದು ಸ್ವಯಂ ನಿಧಿ ಯೋಜನೆಯಾಗಿರುತ್ತದೆ. ಸಹಕಾರ ಸಂಘಗಳ ಸದಸ್ಯರ ಆರೋಗ್ಯ ರಕ್ಷಣಾ (Co-operative Society Members Health Assurance Scheme) ಯೋಜನೆಯಾಗಿದ್ದು, ಸಹಕಾರ ಸಂಘಗಳ ಸದಸ್ಯರು ನಿಗದಿತ ವಾರ್ಷಿಕ ವಂತಿಗೆಯನ್ನು ಪಾವತಿಸಿ ಯೋಜನೆಯಲ್ಲಿ ಪಾಲ್ಗೊಳ್ಳುತ್ತಾರೆ. ರಾಜ್ಯ ಸರ್ಕಾರವು ಆಯವ್ಯಯದಲ್ಲಿ ಅನುದಾನ ಒದಗಿಸುವ ಮೂಲಕ ಯೋಜನೆಯಲ್ಲಿ ಭಾಗವಹಿಸುತ್ತದೆ.
ಯಶಸ್ವಿನಿ ಯೋಜನೆಯನ್ನು 2025-26ನೇ ಸಾಲಿಗೂ ಮುಂದುವರೆಸಲು ಯಶಸ್ವಿನಿ ಟ್ರಸ್ಟ್ ಇವರು ಕೋರಿರುವುದರಿಂದ ಸದಸ್ಯರ ನೋಂದಣಿಯನ್ನು ಪ್ರಾರಂಭಿಸಲು ಯೋಜನೆಯ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.









