ಬೆಳಗಾವಿ : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಇದೀಗ ಸ್ಪೋಟಕ ವಾದಂತಹ ಆರೋಪ ಮಾಡಿದ್ದು, ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿಸಲು ಬಿಎಸ್ ಯಡಿಯೂರಪ್ಪ ಹಾಗೂ ಪುತ್ರ ಬಿ.ವೈ ವಿಜಯೇಂದ್ರ ದೆಹಲಿಗೆ ಹೋಗಿ ಬಂದು ಮಾಡುತ್ತಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ಬೆಳಗಾವಿಯಲ್ಲಿ ಪಂಚಮಸಾಲಿ ವಕೀಲರ ಸಮಾವೇಶದಲ್ಲಿ ಮಾತನಾಡಿದ ಯತ್ನಾಳ್, ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿಸಲು ಯಡಿಯೂರಪ್ಪ ಹಾಗೂ ಪುತ್ರ ವಿಜಯೇಂದ್ರ ಹಲವು ಬಾರಿ ದೆಹಲಿಗೆ ಹೋಗಿ ಬಂದರೂ, ಅವರ ಕೈಗೆ ಸಿಕ್ಕಿದ್ದೂ ಕೇವಲ ಚೆಂಡು ಮಾತ್ರ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.
ಅಪ್ಪ-ಮಗ ದೆಹಲಿಗೆ ಹೋಗುತ್ತಿದ್ದಂತೆ ಯತ್ನಾಳ್ ಪಕ್ಷದಿಂದ ಉಚ್ಚಾಟನೆ ಖಚಿತ ಎಂಬ ಸುಳ್ಳು ಸುದ್ದಿ ಹಬ್ಬುತ್ತದೆ. ಆದರೆ ಅವರು ದೆಹಲಿಯಿಂದ ವಾಪಸ್ ಬರುವಾಗ ತಲೆ ಕೆಳಗೆ ಹಾಕಿಕೊಂಡು ಬರುತ್ತಾರೆ. ಅಪ್ಪ-ಮಗ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ಸಾಧ್ಯವಿಲ್ಲ. ಪಂಚಮಸಾಲಿ ಸಮುದಾಯ ಯತ್ನಾಳ್ ಪರವಿದೆ, ಪ್ರಖರ ಹಿಂದೂವಾದಿಗಳು. ನೀವು ಸುಮ್ಮನೆ ನಿಭಾಸಿಕೊಂಡು ಹೋಗಿ ಎಂದು ಅಪ್ಪ-ಮಗನಿಗೆ ಹೈಕಮಾಂಡ್ ಬುದ್ದಿ ಹೇಳಿ ಕಳಿಸುತ್ತದೆ ಎಂದು ತಿಳಿಸಿದರು.
ಅಲ್ಲದೆ ಇತ್ತೀಚಿಗೆ ಗೋಕಾಕ್ ಮತಕ್ಷೇತ್ರದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷವಾಗಿದ್ದು ಒಪ್ಪಲ್ಲ ಎಂದು ಹೇಳಿಕೆ ನೀಡಿದ್ದರು. ಈ ಒಂದು ಹೇಳಿಕೆಗೆ ಕೂಡ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬೆಂಬಲ ಸೂಚಿಸಿದ್ದರು. ರಮೇಶ್ ಜಾರಕಿಹೊಳಿ ಹೇಳಿಕೆಗೆ ಬಿ.ವೈ ವಿಜಯೇಂದ್ರ ತಿರುಗೇಟು ನೀಡಿ ಯಾರು ಒಪ್ಪುತ್ತಾರೋ ಇಲ್ವೋ ಗೊತ್ತಿಲ್ಲ, ಆದರೆ ಕಾರ್ಯಕರ್ತರು ನನ್ನನ್ನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಒಪ್ಪಿದ್ದಾರೆ ಎಂದು ಟಾಂಗ್ ನೀಡಿದ್ದರು.