ಬೆಂಗಳೂರು : ಜನ ಕಲ್ಯಾಣಗಳಿಗಾಗಿ ರಾಜ್ಯವು ವರ್ಷಕ್ಕೆ 1.12 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಈವರೆಗೆ 1.13 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನವನ್ನು ವಿನಿಯೋಗಿಸಲಾಗಿದೆ. ಇದರ ಪರಿಣಾಮವಾಗಿ ಜನರ ಕೊಳ್ಳುವ ಶಕ್ತಿ ಹೆಚ್ಚಿದೆ, ಕುಟುಂಬಗಳು ಆರ್ಥಿಕವಾಗಿ ಸಬಲವಾಗುತ್ತಿವೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.
77ನೇ ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ರಾದೇಶಿಕ ಅಸಮಾನತೆಗಳನ್ನು ಹೋಗಲಾಡಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಇದರ ಮೂಲಕ ಕರ್ನಾಟಕದಲ್ಲಿ ಸಾಮಾಜಿಕ ಹಾಗೂ ರಾಜಕೀಯ ಚೈತನ್ಯ ಉದಯಿಸುತ್ತಿದೆ. ಕರ್ನಾಟಕ ಸರ್ಕಾರವು ಸಂವಿಧಾನ ಪ್ರಸ್ತಾಪಿಸಿರುವ ಭಾತೃತ್ವ, ಸ್ವಾತಂತ್ರ ಹಾಗೂ ಸಮಾನತೆಯನ್ನು ಆದ್ಯತೆಯ ವಿಷಯಗಳನ್ನಾಗಿ ಪರಿಗಣಿಸಿದೆ.
ರಾಜ್ಯದ ಪ್ರತಿ ಪ್ರದೇಶ ಹಾಗೂ ಪ್ರತಿ ಸಮುದಾಯಗಳ ಜನರ ಧ್ವನಿಗಳನ್ನು ಆಲಿಸಿ, ಅವುಗಳಿಗೆ ನ್ಯಾಯೋಚಿತ ಪರಿಹಾರ ನೀಡುವ ಕೆಲಸವನ್ನು ಮಾಡುತ್ತಿದೆ. ಸರ್ಕಾರದ ವಿವಿಧ ನೇಮಕಾತಿಗಳಲ್ಲಿ ಅಲಕ್ಷಿತರಿಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ. ವಿವಿಧ ಜನಸಮುದಾಯಗಳ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳಲು ಆಯೋಗಗಳನ್ನು ರಚಿಸಿ ಅವುಗಳ ಶಿಫಾರಸುಗಳನ್ನು ಜಾರಿ ಮಾಡಲಾಗುತ್ತಿದೆ.
ಸಂವಿಧಾನದ ಮುಖ್ಯ ಆಶಯದಂತೆ ಅತ್ಯಂತ ಹಿಂದುಳಿದ ಸಂವಿಧಾನದ ಮುಖ್ಯ ಹಿಂದುಳಿದವರ ಬಲವರ್ಧನೆಗಾಗಿ ರಾಜ್ಯದ ಜನರಿಗೆ ಆರ್ಥಿಕ ಚೈತನ್ಯ ನೀಡುವುದಕ್ಕಾಗಿ ರಾಜ್ಯವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.ಮಹಿಳಾ ಸಮುದಾಯದಲ್ಲಿ ಹೊಸ ಆರ್ಥಿಕ ಸಾಮಾಜಿಕ ಉತ್ಸಾಹ ಬಂದಿದೆ. ದೇಶದಲ್ಲಿ ಗ್ರಾಹಕ ಬೆಲೆ ಸೂಚ್ಯಂಕಗಳು ಆರೋಗ್ಯಕರವಾಗಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ ಎಂದು ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಣ್ಣಿಸಿದ್ದಾರೆ.








