ಬೆಂಗಳೂರು : ಕಳೆದ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಬಾನೆಟ್ ಮೇಲೆ ವ್ಯಕ್ಯಿಯೊಬ್ಬರು ಕೂತಿದ್ದರೂ ಲೆಕ್ಕಿಸಿದೇ ವಾಹನ ಚಲಾಯಿಸಿದ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿರುವ ಕೊಲೆ ಯತ್ನ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ. ಈ ಮೂಲಕ ಕಾರು ಚಾಲಕನಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.
ಬೆಂಗಳೂರಿನ ಆರ್. ಸುರೇಶ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ತನಿಖೆಯ ನೆಪದಲ್ಲಿ ಪೊಲೀಸರು ಅರ್ಜಿದಾರರ ವಿರುದ್ಧ ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂದು ಮಧ್ಯಂತರ ಆದೇಶ ಮಾಡಿದೆ.
ವಾದ ಆಲಿಸಿದ ಪೀಠ, ರಜಾಕಾಲದ ಬಳಿಕ ಪ್ರಕರಣದ ವಿಚಾರಣೆ ನಡೆಸಲಾಗುವುದು. ಅಲ್ಲಿಯವರಿಗೆ ಬಲವಂತದ ಕ್ರಮ ಕೈಗೊಳ್ಳಬಾರದು. ಎಲ್ಲರ ವಾದಗಳಿಗೂ ಪ್ರತಿಕ್ರಿಯಿಸಲಾಗುವುದು. ಆರೋಪ ಪಟ್ಟಿಯನ್ನು ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸುವುದಕ್ಕೂ ಮುನ್ನ ಹೈಕೋರ್ಟ್ಗೆ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಜೂನ್ 5 ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ?
ಫೆಬ್ರುವರಿ 11ರಂದು ಎಸ್ಯುವಿ ವಾಹನದ ಚಾಲಕ ಆರ್ ಸುರೇಶ್ ಮತ್ತು ದೂರುದಾರ ನಂಜುಂಡ ನಡುವೆ ರಸ್ತೆಯಲ್ಲಿ ವಾಗ್ವಾದ ನಡೆದಿತ್ತು. ಸಂಬಂಧಿಯೊಬ್ಬರೊಂದಿಗೆ ಹೂವು ಕೊಂಡೊಯ್ಯುತ್ತಿದ್ದ ದೂರುದಾರ ವಾಹನದ ಹಿಂದೆ ಇದ್ದ ಸುರೇಶ್ ಅವರು ಪದೇ ಪದೇ ಹಾರ್ನ್ ಮಾಡಿದ್ದರಿಂದ ನಡುವೆ ವಾಗ್ವಾದ ನಡೆದಿತ್ತು.
ಈ ವೇಳೆ ಕಾರು ಚಾಲಕ ಅಲ್ಲಿಂದ ತೆರಳಲು ಮುಂದಾದಾಗ ಕಾರಿನ ಬಾನೆಟ್ ಮೇಲೆ ಏರಿ ಕುಳಿತಿದ್ದರು. ಇದನ್ನು ಲೆಕ್ಕಿಸದೇ ಸುರೇಶ್ ಮುನ್ನಡೆದಿದ್ದು, ಸಾರ್ವಜನಿಕರ ಮಧ್ಯಪ್ರವೇಶದಿಂದ ಕಾರನ್ನು ನಿಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸುರೇಶ್ ವಿರುದ್ಧ ಕೊಲೆ ಯತ್ನ ಮತ್ತು ಶಾಂತಿಗೆ ಭಂಗ ಆರೋಪದ ಅಡಿ ಪ್ರಕರಣ ದಾಖಲಿಸಲಾಗಿತ್ತು.








