ರಾಜಸ್ತಾನ : ರಾಜಸ್ಥಾನದ ಸೀಕರ್‌ನಲ್ಲಿ NEET ಪರೀಕ್ಷೆಗೆ ಸಿದ್ಧವಾಗುತ್ತಿದ್ದ 22ರ ಉಮೇಶ್ ಮಾಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೂನ್ 21ರ ನೀಟ್ ಮರುಪರೀಕ್ಷೆಯ ಒತ್ತಡ, ಜೊತೆಗೆ ಇದು ಮೂರನೇ ಪ್ರಯತ್ನವಾಗಿದ್ದರಿಂದ ಆತ ಆತಂಕಕ್ಕೊಳಗಾಗಿದ್ದ ಎನ್ನಲಾಗಿದೆ. ನೀಟ್ ಪರೀಕ್ಷೆಯ ಗೊಂದಲಗಳ ನಡುವೆ ಸೀಕರ್‌ನಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ನಡೆದ ಎರಡನೇ ವಿದ್ಯಾರ್ಥಿ ಸಾವು ಇದಾಗಿದೆ.
ಮೃತ ಯುವಕನನ್ನು ಜುಂಜುನು ಜಿಲ್ಲೆಯ ನವಲಗಢ ಪ್ರದೇಶದ ಕಾರಿ ಗ್ರಾಮದ ನಿವಾಸಿ ಉಮೇಶ್ ಮಾಲಿ ಎಂದು ಗುರುತಿಸಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಪ್ರವೇಶ ಪಡೆಯುವ ಕನಸಿನಿಂದ ಅವರು ಸಿಕಾರ್‌ನ ಪಿಪ್ರಾಲಿ ರಸ್ತೆಯಲ್ಲಿರುವ ವಸತಿ ನಿಲಯದಲ್ಲಿ ವಾಸಿಸುತ್ತಿದ್ದರು. ಮೂಲಗಳ ಪ್ರಕಾರ, ಉಮೇಶ್ ಅವರಿಗೆ ಇದು ಮೂರನೇ ಪ್ರಯತ್ನವಾಗಿತ್ತು ಎನ್ನಲಾಗಿದೆ. ಘಟನಾ ಸ್ಥಳದಿಂದ ಪೊಲೀಸರು ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದು, ಅದರಲ್ಲೇನಿದೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಪೊಲೀಸ್ ಮಾಹಿತಿಯ ಪ್ರಕಾರ, ಉಮೇಶ್ ತನ್ನ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಕುಟುಂಬ ಸದಸ್ಯರು ಮೊದಲು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಉದ್ಯೋಗ್ ನಗರ ಪೊಲೀಸ್ ಠಾಣೆಯ ಪ್ರಭಾರಿ ರಾಜೇಶ್ ಬುಡಾನಿಯಾ ಮತ್ತು ತಂಡವು ಪರಿಶೀಲನೆ ನಡೆಸಿದೆ. ನಂತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶ್ರೀ ಕಲ್ಯಾಣ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕ್ರಿಯೆ ಮುಗಿದ ನಂತರ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.








