ಬೆಂಗಳೂರು: ರಾಜ್ಯದಲ್ಲಿ ಮರ್ಯಾದೆಗೇಡು ಹತ್ಯೆ ಎಸೆಗುವವರಿಗೆ ಜೀವಾವಧಿ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿ ದಂಡ ವಿಧಿಸುವ ಮಸೂದೆ ಕರಡು ಸಿದ್ಧಪಡಿಸಲಾಗಿದ್ದು, ಶೀಘ್ರವೇ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಇತ್ತೀಚೆಗೆ ಗರ್ಭಿಣಿ ಮಾನ್ಯಾ ಪಾಟೀಲ್ ಅವರನ್ನು ತಂದೆಯೇ ಹತ್ಯೆ ಮಾಡಿದ್ದ ಪ್ರಕರಣ ದೇಶಾದ್ಯಂತ ಗಮನಸೆಳೆದಿದ್ದು, ಅಮಾನವೀಯ ಮತ್ತು ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಗಳನ್ನು ತಡೆಯಲು ಪ್ರತ್ಯೇಕ ಕಾಯ್ದೆ ಜಾರಿಗೆ ತರಬೇಕೆಂಬ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಮದುವೆ ಮತ್ತು ಸಂಗಾತಿ ಆಯ್ಕೆಯ ಸ್ವಾತಂತ್ರ್ಯ ಗೌರವ ಮತ್ತು ಸಂಪ್ರದಾಯದ ಹೆಸರಲ್ಲಿ ಅಪರಾಧಗಳ ತಡೆಗಟ್ಟುವಿಕೆ ಮತ್ತು ನಿಷೇಧ ಮಸೂದೆ 2026 ಕರಡು ರೂಪಿಸಿದೆ.
ಮರ್ಯಾದೆಗೇಡು ಹತ್ಯೆ ತಡೆಗೆ ಮಾನ್ಯಾ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ ತರುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹದೇವಪ್ಪ ಹೇಳಿದರು.
ಮರ್ಯಾದೆಗೇಡು ಹತ್ಯೆ ನಡೆದ ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮಕ್ಕೆ ಗುರುವಾರ (ಜ.1) ಭೇಟಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಏಳು ತಿಂಗಳ ಗರ್ಭಿಣಿ ಹೆಣ್ಣು ಮಗಳನ್ನು ಅವರ ಕುಟುಂಬಸ್ಥರೇ ಕೊಲೆ ಮಾಡಿರುವುದು ಮನುಷ್ಯತ್ವ ವಿರೋಧಿ. ಯಾವುದೇ ಧರ್ಮ, ಜಾತಿ ಇರಲಿ ಇದು ನೊಂದು ತಲೆ ತಗ್ಗಿಸುವಂತಹ ಘಟನೆ ಎಂದು ಸಚಿವರು ಹೇಳಿದರು.
ಕೊಲೆಯಾದ ಮಾನ್ಯಾ ಮತ್ತು ಆಕೆಯ ಗಂಡ ಇಬ್ಬರೂ ವಯಸ್ಕರು. ಅವರಿಗೆ ಕಾನೂನು ಬದ್ದವಾಗಿ ಮದುವೆಯಾಗುವ ಸ್ವಾತಂತ್ರ್ಯ ಇತ್ತು. ಅದರು ಅವರ ಮೂಲಭೂತ ಹಕ್ಕು. ಇಲ್ಲಿ ಆ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಅಂಬೇಡ್ಕರ್ ಅವರು ಮದುವೆ ಹೆಣ್ಣಿನ ಇಚ್ಚೆಗೆ ಅನುಗುಣವಾಗಿ ನಡೆಯಬೇಕು, ಬಲವಂತವಾಗಿ ನಡೆಯಬಾರದು ಎಂದಿದ್ದಾರೆ. ಈ ಕೊಲೆಗೆ ಕಾರಣರಾದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಹಾಗೂ ನಾವೆಲ್ಲ ಸಚಿವರು ಸೂಚಿಸಿದ್ದೇವೆ. ಇದು ದಲಿತ ದೌರ್ಜನ್ಯದ ಪ್ರಕರಣವೂ ಹೌದು. ನಾವು ಇತ್ತೀಚೆಗಷ್ಟೇ ಚಳಿಗಾಲದ ಅಧಿವೇಶನದಲ್ಲಿ ಸಾಮಾಜಿಕ ಬಹಿಷ್ಕಾರದ ವಿರುದ್ದ ಕಾನೂನು ರೂಪಿಸಿದ್ದೇವೆ ಎಂದರು ಹೇಳಿದರು.








