ಉತ್ತರಕನ್ನಡ : ಕಳೆದ ಭಾನುವಾರ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ನ್ಯೂ ಕೆ.ಹೆಚ್.ಬಿ ಕಾಲೋನಿಯಲ್ಲಿ ಡಾ. ರಮೇಶ್ ಕಲಘುಟಕರ್ (51) ಎಂಬ ಆಯುರ್ವೇದ ವೈದ್ಯರ ಕೊಲೆಯಾಗಿತ್ತು. ಭಾನುವಾರ ಸಂಜೆ ಘಟನೆ ಬೆಳಕಿಗೆ ಬಂದಿತ್ತು. ಬಳಿಕ ಪ್ರಕರಣ ದಾಖಲಿಸಿಕೊಂಡ ಶಿರಸಿ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಶಂಕಿತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು ಶಿರಸಿಯ ಆಯುರ್ವೇದಿಕ್ ವೈದ್ಯನ ಕೊಲೆ ಪ್ರಕರಣವನ್ನು 24 ಗಂಟೆಯಲ್ಲಿ ಭೇದಿಸುವಲ್ಲಿ ಶಿರಸಿಯ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆ ಆರೋಪಿ ಮಂಜುನಾಥ ಪಾಂಡುರಂಗ ನಾಯ್ಕ (70) ಎಂಬತನನ್ನ ಬಂಧಿಸಿದ್ದಾರೆ.ವೈದ್ಯ ಡಾ. ರಮೇಶ್ ಅವರು ಶಿರಸಿ ನಗರದ ಡಿಪೋ ಎದುರು ಆಯುರ್ವೇದದ ಆಸ್ಪತ್ರೆಯನ್ನು ಹೊಂದಿದ್ದರು. ಅವರ ಪತ್ನಿ ಕಳೆದ ಐದು ತಿಂಗಳ ಹಿಂದಷ್ಟೇ ಮೃತಪಟ್ಟಿದ್ದು, ಪತ್ನಿಯ ತಂಗಿಯ ಜೊತೆಗೆ ಸೋಮವಾರ ಮರು ಮದುವೆ ನಿಶ್ಚಯವಾಗಿತ್ತು.
ಮದುವೆಗಾಗಿ ಬಂಗಾರದ ಆಭರಣ ಹಾಗೂ ಹಣ ತಂದಿಟ್ಟಿದ್ದರು. ಇದೇ ಅವರ ಜೀವಕ್ಕೆ ಮುಳುವಾಗಿದ್ದು, ವೈದ್ಯನ ಕೊಲೆ ಮಾಡಿ ಶಂಕಿತ ಆರೋಪಿ ಆಭರಣ ಹಾಗೂ ಹಣ ದೋಚಿಕೊಂಡು ಪರಾರಿಯಾಗಿದ್ದನು. ಘಟನೆಯ ಬಳಿಕ ಆರೋಪಿಯ ಪತ್ತೆಗಾಗಿ ಡಿಎಸ್ಪಿ ಗೀತಾ ಪಾಟೀಲ್ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿತ್ತು.








