ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಸಿದ್ದರಾಮಯ್ಯ ಅವರ ರಾಜೀನಾಮೆ ಪರ್ವ ಮುಗಿಯುತ್ತಿದ್ದಂತೆ, ಇದೀಗ ಎಲ್ಲರ ಕಣ್ಣು ನೂತನ ಸಚಿವ ಸಂಪುಟದ ಮೇಲೆ ನೆಟ್ಟಿದೆ. ಮುಖ್ಯಮಂತ್ರಿ ಕುರ್ಚಿ ಏರಲಿರುವ ಡಿ.ಕೆ.ಶಿವಕುಮಾರ್ ಅವರಿಗೆ ಹೈಕಮಾಂಡ್ ಯಾವ ರೀತಿಯ ಟೀಮ್ ನೀಡಲಿದೆ ಎಂಬ ಕುತೂಹಲ ತೀವ್ರಗೊಂಡಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಭಾರಿ ಸರ್ಜರಿಗೇ ಕೈಹಾಕಿದೆ.
ವಿಶೇಷವಾಗಿ, ಹೊಸ ಸಂಪುಟದಲ್ಲಿ ಕನಿಷ್ಠ 20 ಮಂದಿ 50 ವರ್ಷದೊಳಗಿನ ಯುವಕರಿಗೆ ಅವಕಾಶ ನೀಡಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಹಳೆಯ ಮುಖಗಳಿಗೆ ಈ ಬಾರಿ ಸಚಿವ ಸ್ಥಾನ ಕೈತಪ್ಪುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಂಪೂರ್ಣ ‘ಯುವ ಪಡೆ’ಯನ್ನು ಕಣಕ್ಕಿಳಿಸಲು ದೆಹಲಿ ಮಟ್ಟದಲ್ಲಿ ಪ್ಲಾನ್ ಸಿದ್ಧವಾಗಿದೆ.
ಇಬ್ಬರು ಡಿಸಿಎಂ ಲೆಕ್ಕಾಚಾರ: ಯತೀಂದ್ರ ಸಿದ್ದರಾಮಯ್ಯಗೆ ಸಿಗುತ್ತಾ ಹೈಕಮಾಂಡ್ ಗ್ರೀನ್ ಸಿಗ್ನಲ್?
ಲಭ್ಯವಿರುವ ಆಂತರಿಕ ಮೂಲಗಳ ಪ್ರಕಾರ, ಹೊಸ ಸರ್ಕಾರದಲ್ಲಿ ಇಬ್ಬರು ಉಪಮುಖ್ಯಮಂತ್ರಿ (DCM) ಹುದ್ದೆಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದರಿಂದ, ಸಾಮಾಜಿಕ ಸಮತೋಲನ ಕಾಯ್ದುಕೊಳ್ಳಲು ಹಿಂದುಳಿದ ವರ್ಗ (OBC) ಹಾಗೂ ಪರಿಶಿಷ್ಟ ಜಾತಿ (SC) ಸಮುದಾಯದ ನಾಯಕರಿಗೆ ಡಿಸಿಎಂ ಪಟ್ಟ ಕಟ್ಟುವ ಲೆಕ್ಕಾಚಾರ ನಡೆದಿದೆ.
ಇದೇ ವೇಳೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಹೈಕಮಾಂಡ್ ಮುಂದೆ ಪಟ್ಟು ಹಿಡಿಯುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ, ಯತೀಂದ್ರ ಅವರಿಗೆ ರಾಜಕೀಯ ಅನುಭವದ ಕೊರತೆ ಇರುವುದರಿಂದ ಅಂತಿಮ ನಿರ್ಧಾರವನ್ನು ಕಾಂಗ್ರೆಸ್ ವರಿಷ್ಠರೇ ಕೈಗೊಳ್ಳಲಿದ್ದಾರೆ.
ಜಾತಿ ಮತ್ತು ಪ್ರಾದೇಶಿಕ ಸಮತೋಲನದ ಅತಿದೊಡ್ಡ ಸವಾಲು
ಹೊಸ ಸಂಪುಟ ರಚನೆಯಲ್ಲಿ ಜಾತಿ ಮತ್ತು ಜಿಲ್ಲಾವಾರು ಪ್ರಾತಿನಿಧ್ಯ ನೀಡುವುದು ಹೈಕಮಾಂಡ್‌ಗೆ ಅತಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ಅವರ ಹಿಂದಿನ ಸಂಪುಟದಲ್ಲಿದ್ದ ಬಹುತೇಕ ಸಚಿವರು ಈ ಬಾರಿ ಸ್ಥಾನ ಕಳೆದುಕೊಳ್ಳುವುದು ನಿಶ್ಚಿತ ಎನ್ನಲಾಗುತ್ತಿದೆ.
ಹಿಂದಿನ ಸರ್ಕಾರದಲ್ಲಿ ಬೆಂಗಳೂರಿಗೆ ಸಿಂಹಪಾಲು (7 ಸಚಿವ ಸ್ಥಾನ) ಸಿಕ್ಕಿದ್ದರೆ, ಉಡುಪಿ, ಚಾಮರಾಜನಗರ, ಹಾಸನ, ಕೊಡಗು (ಮಡಿಕೇರಿ), ಕೋಲಾರ, ಹಾವೇರಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಒಂದೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಬೆಂಗಳೂರಿನ ಪ್ರಾಬಲ್ಯವನ್ನು ಕೊಂಚ ತಗ್ಗಿಸಿ, ಈವರೆಗೆ ಪ್ರಾತಿನಿಧ್ಯ ಸಿಗದ ಜಿಲ್ಲೆಗಳಿಗೆ ನ್ಯಾಯ ಒದಗಿಸಲು ಸಿದ್ಧತೆ ನಡೆದಿದೆ. ಜೊತೆಗೆ, ಮೊದಲ ಹಂತದಲ್ಲೇ ಎಲ್ಲ ಸಚಿವ ಸ್ಥಾನಗಳನ್ನು ಭರ್ತಿ ಮಾಡದೆ, ಕೆಲವು ಸ್ಥಾನಗಳನ್ನು ಬಾಕಿ ಉಳಿಸಿಕೊಳ್ಳುವ ತಂತ್ರವನ್ನೂ ಹೈಕಮಾಂಡ್ ಹೂಡಿದೆ.
ಹಿಂದಿನ ಸಂಪುಟದ ಜಾತಿ ಲೆಕ್ಕಾಚಾರ ಹೀಗಿತ್ತು:
ಕುರುಬ ಸಮುದಾಯ (ಸಿದ್ದರಾಮಯ್ಯ ಸೇರಿದಂತೆ)- 2, ಒಬಿಸಿ- 4, ಎಸ್ಟಿ- 1, ಒಕ್ಕಲಿಗ- 5, ಲಿಂಗಾಯತ- 7, ಬ್ರಾಹ್ಮಣ- 1, ರೆಡ್ಡಿ- 2, ಕ್ರಿಶ್ಚಿಯನ್- 1, ಮುಸ್ಲಿಂ- 2. (ಸುಧಾಕರ್ ಅವರ ನಿಧನ ಹಾಗೂ ರಾಜಣ್ಣ, ನಾಗೇಂದ್ರ ಅವರ ನಿರ್ಗಮನದಿಂದ 3 ಸ್ಥಾನಗಳು ಈಗಾಗಲೇ ಖಾಲಿ ಉಳಿದಿದ್ದವು). ಈ ಬಾರಿ ಈ ಸಮೀಕರಣ ಸಂಪೂರ್ಣ ಬದಲಾಗಲಿದೆ.
ಹೊಸ ಸಂಪುಟದ ರೇಸ್‌ನಲ್ಲಿರುವ ಸಂಭಾವ್ಯ ನಾಯಕರ ಪಟ್ಟಿ (ಜಿಲ್ಲಾವಾರು):
ಮೈಸೂರು: ಯತೀಂದ್ರ ಸಿದ್ದರಾಮಯ್ಯ, ತನ್ವೀರ್ ಸೇಠ್
ಬೆಂಗಳೂರು: ಎನ್.ಎ.ಹ್ಯಾರೀಸ್ / ರಿಜ್ವಾನ್ ಅರ್ಷದ್, ಕೃಷ್ಣಪ್ಪ / ಕೃಷ್ಣಬೈರೇಗೌಡ, ರಾಮಲಿಂಗಾ ರೆಡ್ಡಿ
ಬೆಂಗಳೂರು ಗ್ರಾಮಾಂತರ: ಶರತ್ ಬಚ್ಚೇಗೌಡ
ಬೆಂಗಳೂರು ದಕ್ಷಿಣ: ಮಾಗಡಿ ಬಾಲಕೃಷ್ಣ
ತುಮಕೂರು: ಟಿ.ಬಿ.ಜಯಚಂದ್ರ
ಕೋಲಾರ: ರೂಪಕಲಾ ಶಶಿಧರ್ / ಎಸ್.ಎನ್.ನಾರಾಯಣಸ್ವಾಮಿ
ಚಿತ್ರದುರ್ಗ: ಟಿ.ರಘುಮೂರ್ತಿ
ದಾವಣಗೆರೆ: ಎಸ್.ಎಸ್.ಮಲ್ಲಿಕಾರ್ಜುನ
ಬಳ್ಳಾರಿ: ಕಂಪ್ಲಿ ಗಣೇಶ
ಶಿವಮೊಗ್ಗ: ಮಧು ಬಂಗಾರಪ್ಪ / ಬಿ.ಕೆ.ಸಂಗಮೇಶ್
ಮಂಡ್ಯ: ಚಲುವರಾಯಸ್ವಾಮಿ / ಪಿ.ಎಂ.ನರೇಂದ್ರಸ್ವಾಮಿ
ದಕ್ಷಿಣ ಕನ್ನಡ: ಯು.ಟಿ.ಖಾದರ್
ಉತ್ತರ ಕನ್ನಡ: ಮಂಕಾಳ್ ವೈದ್ಯ / ಆರ್.ವಿ.ದೇಶಪಾಂಡೆ
ಗದಗ: ಎಚ್.ಕೆ.ಪಾಟೀಲ್
ಹಾವೇರಿ: ರುದ್ರಪ್ಪ ಲಮಾಣಿ
ಧಾರವಾಡ: ಎನ್.ಎಚ್.ಕೋನರೆಡ್ಡಿ / ಪ್ರಸಾದ್ ಅಬ್ಬಯ್ಯ
ಕೊಪ್ಪಳ: ರಾಘವೇಂದ್ರ ಇಟ್ನಾಳ್ / ಶಿವರಾಜ ತಂಗಡಗಿ
ವಿಜಯಪುರ: ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್ / ನಾಡಗೌಡ
ಬೆಳಗಾವಿ: ಸತೀಶ್ ಜಾರಕಿಹೊಳಿ, ಲಕ್ಷ್ಮಣ ಸವದಿ / ಅಶೋಕ ಪಟ್ಟಣ್
ಕಲಬುರ್ಗಿ: ಪ್ರಿಯಾಂಕ ಖರ್ಗೆ / ಡಾ.ಅಜಯ್ ಸಿಂಗ್
ಬೀದರ್: ಈಶ್ವರ ಖಂಡ್ರೆ
ಸ್ಪೀಕರ್ ರೇಸ್‌ನಲ್ಲಿ ಯಾರಿದ್ದಾರೆ?:
ವಿಧಾನಸಭೆಯ ನೂತನ ಸ್ಪೀಕರ್ ಹುದ್ದೆಗೆ ಹಿರಿಯ ನಾಯಕರಾದ ಡಾ.ಜಿ.ಪರಮೇಶ್ವರ ಅಥವಾ ದಿನೇಶ್ ಗುಂಡೂರಾವ್ ಅವರ ಹೆಸರು ಮುಂಚೂಣಿಯಲ್ಲಿದೆ.
ಒಟ್ಟಾರೆಯಾಗಿ, ದೆಹಲಿಯಲ್ಲಿ ನಡೆಯಲಿರುವ ಹೈಕಮಾಂಡ್ ಸಭೆಯ ಬಳಿಕವಷ್ಟೇ ಯಾರಿಗೆ ಸಚಿವ ಪಟ್ಟ ಸಿಗಲಿದೆ ಮತ್ತು ಯಾರಿಗೆ ನಿರಾಸೆಯಾಗಲಿದೆ ಎಂಬ ಅಧಿಕೃತ ಚಿತ್ರಣ ಹೊರಬೀಳಲಿದೆ.








