ದೇಶದಲ್ಲಿ ನಕಲಿ ನೋಟುಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದಾಗಿ ಸಾಮಾನ್ಯ ಜನರಿಗೆ ಯಾವುದು ಅಸಲಿ ನೋಟು, ಯಾವುದು ನಕಲಿ ನೋಟು ಎಂದು ಗುರುತಿಸುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸದ್ಯ ಮಾರುಕಟ್ಟೆಯಲ್ಲಿ 500 ರೂಪಾಯಿಯ ನಕಲಿ ನೋಟುಗಳು ಅತಿ ಹೆಚ್ಚು ಚಲಾವಣೆಯಲ್ಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಳವಳ ವ್ಯಕ್ತಪಡಿಸಿದೆ.
ಆರ್ಬಿಐ ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ, ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ 500 ರೂಪಾಯಿಯ ನಕಲಿ ನೋಟುಗಳ ಚಲಾವಣೆ ಶೇ. 20 ರಷ್ಟು ಹೆಚ್ಚಾಗಿದೆ. ಒಟ್ಟಾರೆ ಎಲ್ಲಾ ಮುಖಬೆಲೆಯ ನಕಲಿ ನೋಟುಗಳ ಪ್ರಮಾಣದಲ್ಲಿ ಶೇ. 5.7 ರಷ್ಟು ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮೋಸ ಹೋಗದಂತೆ ಆರ್ಬಿಐ ಎಚ್ಚರಿಕೆ ನೀಡುತ್ತಿದ್ದು, ನಕಲಿ ನೋಟುಗಳನ್ನು ಗುರುತಿಸಲು ವಿಶೇಷ ವೆಬ್ಸೈಟ್ ಒಂದನ್ನು ಪರಿಚಯಿಸಿದೆ.
ವೆಬ್ ಸೈಟ್ ಮೂಲಕ ನಕಲಿ ನೋಟು ಗುರುತಿಸುವುದು ಹೇಗೆ?
ಮೊದಲು ಆರ್ಬಿಐನ ಅಧಿಕೃತ ಪೋರ್ಟಲ್ https://rbikehtahai.rbi.org.in/ ಗೆ ಭೇಟಿ ನೀಡಿ.
ಅಲ್ಲಿ “Know Your Banknotes” (ನಿಮ್ಮ ಬ್ಯಾಂಕ್ ನೋಟುಗಳ ಬಗ್ಗೆ ತಿಳಿಯಿರಿ) ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
ಅಲ್ಲಿ ನಿಮಗೆ ಎಲ್ಲಾ ಮುಖಬೆಲೆಯ (ರೂ. 10, 20, 50, 100, 200, 500) ಕರೆನ್ಸಿ ನೋಟುಗಳು ಕಾಣಿಸುತ್ತವೆ.
ನೀವು ಪರಿಶೀಲಿಸಬೇಕಾದ ನೋಟಿನ ಮೇಲೆ ಕ್ಲಿಕ್ ಮಾಡಿದರೆ, ಅದರಲ್ಲಿರುವ ಅಸಲಿ ಸುರಕ್ಷತಾ ವೈಶಿಷ್ಟ್ಯಗಳನ್ನು (Features) ಮಾರ್ಕ್ ಮಾಡಿ ವಿವರವಾಗಿ ತೋರಿಸಲಾಗುತ್ತದೆ.
ಅಸಲಿ ನೋಟು ಗುರುತಿಸಲು ಈ 4 ಮುಖ್ಯ ಅಂಶಗಳನ್ನು ಗಮನಿಸಿ:
ನಿಮ್ಮ ಕೈಯಲ್ಲಿರುವ ನೋಟು ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಈ ಕೆಳಗಿನ ಪ್ರಮುಖ ಗುರುತುಗಳ ಮೂಲಕ ಸುಲಭವಾಗಿ ಪತ್ತೆಹಚ್ಚಬಹುದು:
1. ಸೆಕ್ಯೂರಿಟಿ ಥ್ರೆಡ್ (ಸುರಕ್ಷತಾ ದಾರ):
ಅಸಲಿ ನೋಟುಗಳ ಮಧ್ಯದಲ್ಲಿ ಹಸಿರು ಬಣ್ಣದ ಸೆಕ್ಯೂರಿಟಿ ಲೈನ್ ಇರುತ್ತದೆ. ನೋಟನ್ನು ಸ್ವಲ್ಪ ಕ್ರಾಸ್ ಮಾಡಿ (ಬಾಗಿಸಿ) ನೋಡಿದಾಗ ಈ ಗೆರೆ ಹಸಿರು ಬಣ್ಣದಿಂದ ಕಡು ನೀಲಿ ಬಣ್ಣಕ್ಕೆ ಬದಲಾಗುತ್ತದೆ. ಒಂದು ವೇಳೆ ಬಣ್ಣ ಬದಲಾಗದಿದ್ದರೆ ಅದು ನಕಲಿ ನೋಟು ಎಂದು ತಿಳಿಯಬೇಕು.
2. ನೋಟಿನ ಕಾಗದದ ಗುಣಮಟ್ಟ:
ಭಾರತೀಯ ಕರೆನ್ಸಿ ನೋಟುಗಳನ್ನು ಸಾಮಾನ್ಯ ಕಾಗದದಿಂದ ತಯಾರಿಸುವುದಿಲ್ಲ. ಹಾಗಾಗಿ, ಅಸಲಿ ನೋಟುಗಳು ಸ್ವಲ್ಪ ತೇವವಾದರೂ ಅಥವಾ ನೀರು ಬಿದ್ದರೂ ಅಷ್ಟು ಬೇಗ ಹರಿದು ಹೋಗುವುದಿಲ್ಲ.
3. ನೋಟಿನ ಹಿಂಭಾಗದ ಚಿತ್ರಗಳು:
ಅಸಲಿ 500 ರೂ. ನೋಟಿನ ಹಿಂಭಾಗದಲ್ಲಿ ಸ್ವಚ್ಛ ಭಾರತದ ಲೋಗೋ ಮತ್ತು ಘೋಷವಾಕ್ಯ (ಸ್ಲೋಗನ್), ವಿವಿಧ ಭಾಷೆಗಳಿರುವ ಪ್ಯಾನೆಲ್ ಹಾಗೂ ದೆಹಲಿಯ ಕೆಂಪು ಕೋಟೆಯ (Red Fort) ಚಿತ್ರವಿರುತ್ತದೆ.
4. ಗಾಂಧೀಜಿ ವಾಟರ್ಮಾರ್ಕ್:
ನೋಟನ್ನು ಬೆಳಕಿಗೆ ಹಿಡಿದು ನೋಡಿದಾಗ ಮಹಾತ್ಮಾ ಗಾಂಧೀಜಿಯವರ ಫೋಟೋ ಮತ್ತು ನೋಟಿನ ಮುಖಬೆಲೆ (ಉದಾಹರಣೆಗೆ 500) ಒಳಗಿನ ಖಾಲಿ ಜಾಗದಲ್ಲಿ ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತದೆ.
ಇನ್ಮುಂದೆ ಯಾರಾದರೂ 500 ರೂಪಾಯಿ ನೋಟು ನೀಡಿದರೆ ತಕ್ಷಣವೇ ಈ ಮೇಲಿನ ಅಂಶಗಳನ್ನು ಪರಿಶೀಲಿಸಿ ಜಾಗರೂಕರಾಗಿರಿ!








